ಡಿ.10 ರಂದು ಆಂದ್ರಪ್ರದೇಶದ ಓಎಂಸಿ ಮತ್ತು ಅಂತರ ಗಂಗಮ್ಮ ಕೊಂಡ ಗಣಿ ಪ್ರದೇಶಕ್ಕೆ ಸಿಇಸಿ ಭೇಟಿ ಪರಿಶೀಲನೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಡಿ.04: ಅಕ್ರಮ ಗಣಿಗಾರಿಕೆಯ ಪ್ರಮಾಣ ಮತ್ತು ಗಣಿ ಗಡಿಗಳ ಉಲ್ಲಂಘನೆ ಹಾಗು ಗಡಿಗಳ ಗುರುತಿಸುವ ಕಾರ್ಯದ ನಿಮಿತ್ತ ಕೇಂದ್ರ ಉನ್ನತ ಅಧಿಕಾರಿ ಸಮಿತಿ(ಸಿಇಸಿ)ಯ ಸದಸ್ಯರಾಗಿರುವ ಚಂದ್ರಪ್ರಕಾಶ್ ಗೋಯಲ್ ಅವರು ಡಿ.10 ರಂದು ಆಂದ್ರಪ್ರದೇಶದ ಓಎಂಸಿ ಮತ್ತು ಅಂತರ ಗಂಗಮ್ಮ ಕೊಂಡ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಡಿ.9 ರಂದು ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿ ವಾಸ್ಯವ್ಯ ಹೂಡುವ ಅವರು ಮರುದಿನ ಬೆಂಗಳೂರಿನಿಂದ ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ. ಅಲ್ಲಿಂದ ಗಣಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ನಂತರ ಅನಂತಪುರಂಗೆ ತೆರಳಿ ಅಲ್ಲಿ ಸುಪ್ರೀಂ ಕೋರ್ಟಿ ರಚಿಸಿರುವ ಸಮಿತಿಯ ಅಧ್ಯಕ್ಷ ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಸುಧಾಂಶು ಧುಲಿಯಾ ಅವರ ಮಾರ್ಗದರ್ಶನದಂತೆ ಆಂದ್ರಪ್ರದೇಶದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮುಖ್ಯ ಅರಣ್ಯಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

ಓಎಂಸಿ ಕಂಪನಿಯಿಂದ ನಿಯಮಗಳನ್ನು ಉಲ್ಲಂಘನೆ ಮಾಡಿ ನಡೆಸಿರುವ ಗಣಿಗಾರಿಕೆ ಬಗ್ಗೆ ಸಿಬಿಐ ನೀಡಿರುವ ದೂರಿನ ಅಂಶಗಳನ್ನು ಪರಿಶೀಲನೆ ಮಾಡಲಿದ್ದಾರೆ. ಈ ವರೆಗೆ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿ ವಿಷಯವನ್ನು ಸೂಕ್ತ ದಾಖಲೆಗಳ ಮೂಲಕ ಸಲ್ಲಿಸದೆ ದಾರಿ ತಪ್ಪಿಸಿದ್ದಾರೆಂಬ ನ್ಯಾಯವಾದಿಗಳ ವಾದದ ಹಿನ್ನಲೆಯಲ್ಲಿ ಸಿಇಸಿ ಸದಸ್ಯರ ಈ ಭೇಟಿ ಪ್ರಾಮುಖ್ಯತೆ ಪಡೆದಿದೆ