ಡಿ.ರವಿಶಂಕರ್‍ರಿಂದ ಗುಂಪು ಮನೆ ಯೋಜನೆಯ ಕೆಲಸ ವಿಳಂಬ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ.ಜ.15:-
ಗುಂಪು ಮನೆ ಯೋಜನೆಯ ಕೆಲಸವನ್ನು ಸ್ಥಳೀಯ ಶಾಸಕ ಡಿ.ರವಿಶಂಕರ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವುದು ಅತ್ಯಂತ ಗಂಭೀರ ಮತ್ತು ಜನವಿರೋಧಿ ನಡೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ತಾಲ್ಲೂಕು ಅಧ್ಯಕ್ಷ ನದೀಂ ಖಾನ್ ತೀವ್ರವಾಗಿ ಖಂಡಿಸಿದ್ದಾರೆ.


ಬಡ ಮತ್ತು ನಿರಾಶ್ರಿತ ಕುಟುಂಬಗಳಿಗೆ ತಕ್ಷಣ ಲಾಭ ತಲುಪಬೇಕಾದ ಈ ಮಹತ್ವದ ಯೋಜನೆ, ಶಾಸಕರ ನಿರ್ಲಕ್ಷ್ಯ ಮತ್ತು ರಾಜಕೀಯ ಆಸಕ್ತಿಯಿಂದ ವರ್ಷಗಳಿಂದ ನೆಲೆಯಲ್ಲೇ ನಿಂತಿದೆ. ಇದರಿಂದ ನೂರಾರು ಬಡ ಕುಟುಂಬಗಳು ಮನೆ ಇಲ್ಲದೆ ಸಂಕಷ್ಟದಲ್ಲಿ ಬದುಕುವಂತಾಗಿದೆ ಎಂದು ಕಿಡಿ ಕಾರಿದರು.
ನಮ್ಮ ಪಕ್ಷದ ಸ್ಪಷ್ಟ ಬೇಡಿಕೆ:-ಗುಂಪು ಮನೆ ಯೋಜನೆಯ ಕೆಲಸವನ್ನು ತಕ್ಷಣವೇ ಪ್ರಾರಂಭಿಸಬೇಕು,ಯಾವುದೇ ನೆಪ ಅಥವಾ ರಾಜಕೀಯ ವಿಳಂಬವಿಲ್ಲದೆ ಬಡವರಿಗೆ ಮನೆಗಳನ್ನು ಶೀಘ್ರವಾಗಿ ಹಂಚಿಕೆ ಮಾಡಬೇಕು.


ಜನರ ತೆರಿಗೆ ಹಣದಿಂದ ಮಂಜೂರಾದ ಯೋಜನೆಗಳನ್ನು ಅಡ್ಡಗಟ್ಟುವುದು, ಜನರ ಹಕ್ಕುಗಳ ಮೇಲೆ ನಡೆಸುವ ದೌರ್ಜನ್ಯವಾಗಿದೆ. ಶಾಸಕರು ಜನರಿಗೆ ಉತ್ತರ ಕೊಡಬೇಕಾದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಈ ವಿಷಯದಲ್ಲಿ ತಕ್ಷಣ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ, ಎಸ್.ಡಿ.ಪಿ.ಐ ಪಕ್ಷ ತಾಲ್ಲೂಕಿನಲ್ಲಿ ಕಾನೂನುಬದ್ಧ ಹಾಗೂ ಜನತಾಂತ್ರಿಕ ಹೋರಾಟವನ್ನು ಆರಂಭಿಸಲು ಬಾಧ್ಯವಾಗುತ್ತದೆ, ಮತ್ತು ಅದರ ಸಂಪೂರ್ಣ ಹೊಣೆಗಾರಿಕೆ ಶಾಸಕರು ಹಾಗೂ ಆಡಳಿತದ ಮೇಲಿದೆ ಎಂದು ಹೇಳಿದರು.


ಇದು ರಾಜಕೀಯ ಲಾಭಕ್ಕಾಗಿ ಅಲ್ಲ ಇದು ಬಡವರ ಮನೆ, ಗೌರವಯುತ ಜೀವನ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗಾಗಿ ನಡೆಯುವ ಹೋರಾಟವಾಗಿದೆ ಎಂದು ವಿವರಿಸಿದರು.