Home ಜಿಲ್ಲೆ ಮೈಸೂರು ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಆ.21:
– ಡಿ.ದೇವರಾಜ್ ಅರಸು ಅವರು ಕೊಟ್ಟ ಕೊಡುಗೆ ಅಪಾರವಾದದ್ದು ಎಂದು ಉಪನ್ಯಾಸಕ ಲಕ್ಷ್ಮಿ ಕಾಂತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಡಿ.ದೇವರಾಜ್ ಅರಸು ಕಲಾಭವನದಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.


ಡಿ.ದೇವರಾಜ ಅರಸು ರವರ ರಾಜಕೀಯ ಯುಗವು ರಾಜ್ಯದಲ್ಲಿ ಆಡಳಿತ ಸುವರ್ಣ ಯುಗವಾಗಿತ್ತು. ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿ ಬಡವರಿಗೆ ಜಮೀನು ಒದಗುವಂತೆ ಮಾಡಿದ್ದಾರೆ. ಕಾರ್ಮಿಕರ ಅಭಿವೃದ್ಧಿಗೆ ಸವಲತ್ತು ನೀಡಿದರು. ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಯಾದ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ರದ್ದುಗೊಳಿಸಿದರು. ಇದರೊಂದಿಗೆ ಜೀತ ಪದ್ಧತಿ ನಿರ್ಮೂಲನೆಗೆ ಅಡಿಪಾಯ ಹಾಕಿದ್ದರು.


ಇಷ್ಟಲ್ಲದೆ ಜಾತಿ ನಿಂದನೆ ವಿರೋಧಿ ಕಾಯ್ದೆ, ಬಡವರಿಗೆ ಪಡಿತರ ಪದಾರ್ಥ ವಿತರಣೆಗೆ ನ್ಯಾಯ ಬೆಲೆ ಅಂಗಡಿ, ಗರೀಬಿ ಹಠಾವೋ, ಕೂಲಿಗಾಗಿ ಕಾಳು ಯೋಜನೆ, ನಿರ್ಗತಿಕರಿಗೆ ವಸತಿ, ನಿವೇಶನ ಹಂಚಿಕೆ, ಸಾಲದಿಂದ ಮುಕ್ತಿ ಹೊಂದಲು ಋಣಭಾರ ಕಾಯ್ದೆ ಜಾರಿ ಮಾಡಿದರು ಮತ್ತು ಹಾವನೂರು ವರದಿ ಜಾರಿಗೊಳಿಸಿ ಹಿಂದುಳಿದ ವರ್ಗಗಳಿಗೆ ಶೇ.27 ಮೀಸಲಾತಿ ನೀಡಿ ಸಾಮಾಜಿಕ ಸಮಾನತೆ ನೀಡಿದರು. ವಿದ್ಯಾರ್ಥಿಗಳಿಗೆ 518 ವಿದ್ಯಾರ್ಥಿನಿಲಯಗಳನ್ನು ತೆರೆದರು. ಭಾಗ್ಯ ಜ್ಯೋತಿ ಮೂಲಕ ಉಚಿತ
ವಿದ್ಯುತ್ ಯೋಜನೆ ಜಾರಿಗೊಳಿಸಿದರು. ವೃದ್ಧರಿಗೆ ವೃದ್ಧಾಪ್ಯ ವೇತನ, ವಿದ್ಯಾರ್ಥಿ ವೇತನ, ಅಂಗವಿಕಲ ವೇತನ ನೀಡಿ ಶೋಷಿತರ, ನೊಂದವರ ಪರವಾಗಿ ಅನೇಕ ಯೋಜನೆ ಜಾರಿ ಮಾಡಿ ನೊಂದವರ ಪರವಾಗಿ ಶ್ರಮಿಸಿದ್ದಾರೆ. ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡುತ್ತಾರೆ. ತುರ್ತು ಪರಿಸ್ಥಿತಿ ಜಾರಿಯಾದ ಕಾರಣ ಇಂದಿರಾ ಗಾಂಧಿಯವರು ರಾಯರೇಲಿಯಲ್ಲಿ ಸೋಲು ಅನುಭವಿಸಿದರು;


ಆದರೆ ಇವರನ್ನು ಚಿಕ್ಕಮಗಳೂರು ಕ್ಷೇತ್ರದಿಂದ ನಿಲ್ಲಿಸಿ ಅರಸು ರವರು ಗೆಲ್ಲಿಸುತ್ತಾರೆ. ರಾಜಕೀಯದ ಕೊನೆಘಟ್ಟದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅರಸು ರವರು ಅಧಿಕಾರ ಕಳೆದುಕೊಳ್ಳುತ್ತಾರೆ. ಆದರೆ ಅವರ ಆಡಳಿತ, ಸಾಮಾಜಿಕ ಸುಧಾರಣೆ ಇಂದಿಗೂ ಶಾಶ್ವತವಾಗಿದೆ. ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್ ಮಾತನಾಡಿ, ಅರಸು ರವರು ಬಡತನ ನಿರ್ಮೂಲನೆಗೆ ಪಣ ತೊಟ್ಟಿದ್ದರು. ಇದಕ್ಕಾಗಿ ಮಾಡಿದ ಕಾನೂನುಗಳು ಯಶಸ್ವಿಯಾಗಿವೆ. ಎಲ್ಲರ ಅಭಿವೃದ್ಧಿಯೇ ಅಧಿಕಾರದ ಧೈಯವೆಂದು ನಂಬಿ ಆಡಳಿತ ನಡೆಸಿದರು. ಅದರಿಂದ ಇವರ ಸ್ಮರಣೆ ಅತ್ಯಮೂಲ್ಯ ಎಂದರು.


ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್, ಎಂಡಿಸಿಸಿ ಬ್ಯಾಂಕ್ ನಿರ್ದೆಶಕ ಈಚೂರು ಲೋಕೇಶ್, ಪಿಎಲ್ಟಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹೊಸಳ್ಳಿ ಕೃಷ್ಣಗೌಡ, ವಕೀಲರಾದ ದೇವರಾಜ್ ಅರಸ್, ಆಹಾರ ಇಲಾಖೆ ಶಿರಸ್ತೇದಾರ್ ಸ್ವಾಮೀಗೌಡ, ಎಇಇ ಯೋಗಾನಂದ, ಸಿಡಿಪಿಒ ವೀಣಾ, ಮುಖಂಡರಾದ ಪಿ.ಎಸ್. ವಿಶಕಂಠಯ್ಯ, ರವಿ ಪಿ.ಎಸ್., ಪಿ.ಮಾದೇವ್, ವಿಜಯ್ ದೇವರಾಜೇ ಅರಸ್, ಅರವಿಂದ್ ರಾಜೇ ಅರಸ್, ಲಕ್ಷ್ಮೀನಾರಾಯಣ್, ಆರ್.ಎಸ್. ಮಾದೇವ್, ಸಣ್ಣಸ್ವಾಮಿ ಸೇರಿದಂತೆ ಇತರರಿದ್ದರು.