
ಸಂಜೆವಾಣಿ ನ್ಯೂಸ್
ಮೈಸೂರು, ಆ.21:- ಎಂಟು ವರ್ಷಗಳ ಕಾಲ ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ನೀಡಿದ ಡಿ ದೇವರಾಜ ಅರಸು ಅವರ ಆದರ್ಶ ಮತ್ತು ವಿಚಾರಧಾರೆಗಳು ಯುವಜನತೆಗೆ ಸದಾ ಮಾರ್ಗದರ್ಶಕ ಎಂದು ಮೈಸೂರು ಪೇಯಿಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಹೆಚ್.ಡಿ. ಗಣೇಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ಆಶ್ರಯದಲ್ಲಿ ನಗರದ ಕಲಾಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 111ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವರು ಇತಿಹಾಸ ಓದುತ್ತಾರೆ, ಆದರೆ ಕೆಲವರು ಇತಿಹಾಸ ಸೃಷ್ಟಿಸುತ್ತಾರೆ. ಈ ಮಾತು ದೇವರಾಜ ಅರಸು ಅವರಿಗೆ ನೂರಕ್ಕೆ ನೂರರಷ್ಟು ಸಲ್ಲುತ್ತದೆ ಎಂದರು.
ಅಧಿಕಾರಕ್ಕಾಗಿ ಅಲ್ಲದೆ, ನಿಜವಾದ ಅರ್ಥದಲ್ಲಿ ಜನಪರ ನಾಯಕರಾಗಿ, ನೊಂದವರ ಜೀವನಕ್ಕೆ ಆಸರೆಯಾಗಿ ಹಾಗೂ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸಿದ ಮಹಾನ್ ವ್ಯಕ್ತಿ ಡಿ. ದೇವರಾಜ ಅರಸು ಅವರು ಎಂದು ಬಣ್ಣಿಸಿದರು.
ಡಿ.ದೇವರಾಜ ಅರಸು ಅವರ ಕೊಡುಗೆ ಸದಾ ಸ್ಮರಣೀಯ:
ಹಿಂದುಳಿದ ವರ್ಗಗಳ ಏಳಿಗೆ, ಸಾಮಾಜಿಕ ನ್ಯಾಯ ಹಾಗೂ ಭೂಸುಧಾರಣೆಯ ಹರಿಕಾರ ಡಿ. ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದ್ದು, ಅವರ ತತ್ವ-ಸಿದ್ದಾಂತಗಳು ಎಂದೆಂದಿಗೂ ಸ್ಮರಣೀಯ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರು ತಿಳಿಸಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಮತ್ತು ಹಕ್ಕುಗಳು ತಲುಪಬೇಕು ಎಂಬ ಧ್ಯೇಯದೊಂದಿಗೆ ಅರಸು ಅವರು ಶ್ರಮಿಸಿದರು. ಭೂಸುಧಾರಣಾ ಕಾಯ್ದೆ ಹಾಗೂ ಉಳುವವನೇ ಭೂಮಿಯ ಒಡೆಯ ಯೋಜನೆಯ ಮೂಲಕ ಶೋಷಿತ ವರ್ಗಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಿದರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿ/ಪಂಗಡಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಪ್ರಾರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು. ಅರಸು ಅವರ ದೂರದರ್ಶಿತ್ವದ ಯೋಜನೆಗಳು ಇಂದು ಸಮಾಜದ ಪ್ರತಿಯೊಬ್ಬರಿಗೂ ಮಾದರಿಯಾಗಿವೆ. ಅವರ ಜಯಂತಿಯನ್ನು ಆಚರಿಸುವುದು ಎಂದರೆ ಅವರು ಹಾಕಿಕೊಟ್ಟ ತತ್ವಗಳ ಹಾದಿಯಲ್ಲಿ ನಡೆಯುವುದಾಗಿದೆ ಎಂದು ತಿಳಿಸಿದರು.
ಸರಗೂರು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಹಾಲಪ್ಪ ಹೆಚ್ ಮಾತನಾಡಿ, ಕರ್ನಾಟಕವನ್ನು ಅನೇಕ ರಾಜರು ಮತ್ತು ಸ್ವತಂತ್ರ ನಂತರದ ಮುಖ್ಯಮಂತ್ರಿಗಳು ಆಳಿದ್ದಾರೆ. ಆದರೆ, ಅಧಿಕಾರಾವಧಿ ಮುಗಿದ ಮೇಲೆಯೂ ಅಪರೂಪದ ಸೇವಕರಾಗಿ ಜನರ ಮನಸ್ಸಿನಲ್ಲಿ ನೆಲೆಸಿದ ಕೆಲವೇ ಮಂದಿಯಲ್ಲಿ ಡಿ.ದೇವರಾಜ ಅರಸು ಅವರು ಅಗ್ರಗಣ್ಯರು ಎಂದು ಹೇಳಿದರು.
ಅರಸು ಅವರು ಅಧಿಕಾರವನ್ನು ಕೇವಲ ಆಡಳಿತ ನಡೆಸುವ ಸಾಧನವಾಗಿ ನೋಡದೆ, ನೊಂದವರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುವ ಜವಾಬ್ದಾರಿಯಾಗಿ ನಿರ್ವಹಿಸಿದರು ಎಂದು ತಿಳಿಸಿದರು.
ಕರ್ನಾಟಕ ರಾಜಕಾರಣದ ಸಮೀಕರಣವನ್ನು ಬದಲಾಯಿಸಿ, ಸಾಮಾಜಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಕೈಗೊಂಡ ಕ್ರಾಂತಿಕಾರಿ ತೀರ್ಮಾನಗಳು ಹಾಗೂ ಅನುಷ್ಠಾನಗಳು ಅಪೂರ್ವವಾದವು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರೇಖಾ ಬಿ.ಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
































