Home ಜಿಲ್ಲೆ ಮೈಸೂರು ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಸಂಜೆವಾಣಿ ವಾರ್ತೆ
ತಿ.ನರಸೀಪುರ ಮೇ.31-
ರಾಜ್ಯದ ಸಿಎಂ ಗದ್ದುಗೆಯನ್ನು ಏರಲು ಡಿ.ಕೆ.ಶಿವಕುಮಾರ್ ಅವರು ಸಜ್ಜಾಗುತ್ತಿದ್ದಂತೆ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಹಲವು ಶಾಸಕರು ವರಿಷ್ಠರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ತಿ.ನರಸೀಪುರ ಶಾಸಕ ಡಾ. ಎಚ್.ಸಿ.ಮಹದೇವಪ್ಪ ಅವರನ್ನು ಕಡೆಗಣಿಸದೆ ಸಚಿವ ಸ್ಥಾನವನ್ನು ನೀಡಲೇಬೇಕು ಅವರ ಬೆಂಬಲಿಗರು ಸೇರಿದಂತೆ ಕಾರ್ಯಕರ್ತರು ಹಾಗೂ ಮುಖಂಡರು ಶನಿವಾರ ಸಭೆ ನಡೆಸಿ ಕಾಂಗ್ರೆಸ್ ನಾಯಕರನ್ನ ಆಗ್ರಹಿಸಿದ್ದಾರೆ.


ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯನ್ನು ನಡೆಸಿ, ನೂತನ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಹಲವು ಸಮಸ್ಯೆಗಳನ್ನು ನಿಭಾಯಿಸಿರುವ ಮಹದೇವಪ್ಪ ಅವರನ್ನ ಕೈ ಬಿಡಬೇಡಿ, ಕಡೆಗಣಿಸಬೇಡಿ. ಜಿಲ್ಲೆಯ ಪೂರ್ಣ ಪ್ರಮಾಣದ ಅಭಿವೃದ್ಧಿಗೆ ಅವರು ಸಚಿವರಾಗಲೇಬೇಕು ಎಂದು ಹಲವರು ಒತ್ತಾಯಿಸಿದರು.


ಹಿರಿಯ ಮುಖಂಡ ಹಾಗೂ ತಾ ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಅಹಿಂದ ವರ್ಗದ ಜನರ ಪ್ರಾಬಲ್ಯವಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಮಹದೇವಪ್ಪ ಅವರ ಜೊತೆಗೆ ಎಂಎಲ್ಸಿ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಬ್ಬರೂ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂಬರುವ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಲಿದೆ. ಅವರ ಅಭಿಮಾನಿಗಳ ಮುನಿಸಿನಿಂದ ಪಕ್ಷದೊಳಗೆ ಆಂತರಿಕ ಭಿನ್ನಮತ ಸೃಷ್ಟಿಯಾಗಲಿದೆ ಎಚ್ಚರಿಸಿದ ಮಲ್ಲಿಕಾರ್ಜುನ ಸ್ವಾಮಿ ಸಂಘಟನೆ ದುರ್ಬಲಗೊಳ್ಳುವುದಕ್ಕೆ ರಾಜ್ಯ ಹಾಗೂ ಕೇಂದ್ರ ನಾಯಕರು ಅವಕಾಶ ಕಲ್ಪಿಸಬಾರದು ಎಂಬ ಸಂದೇಶವನ್ನ ನೀಡಿದರು.


ದಂಗೆ ಹೇಳುತ್ತೇವೆ…
ಭೂ ನ್ಯಾಯ ಮಂಡಳಿ ಸದಸ್ಯ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಕ್ಕೂರು ಗಣೇಶ್ ಮಾತನಾಡಿ, ಡಾ. ಹೆಚ್.ಸಿ.ಮಹದೇವಪ್ಪ ಅವರಿಗೆ ಹೊಸ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನ ಸಿಗಲೇಬೇಕು. ಸಚಿವ ಸ್ಥಾನ ಕೈ ತಪ್ಪದಂತೆ ಸಿದ್ದರಾಮಯ್ಯ ಅವರು ನೋಡಿಕೊಳ್ಳಬೇಕು. ಮೈಸೂರು ಭಾಗದಲ್ಲಿ ರಾಜಕೀಯ ಅಧಿಕಾರದ ಮೂಲಕ ಸಿದ್ದರಾಮಯ್ಯ ಮಹದೇವಪ್ಪ ಜೋಡಿಯಾಗಿ ಅಹಿಂದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದಾರೆ. ಒಂದು ವೇಳೆ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ತಪ್ಪಿದ್ದಲ್ಲಿ ಈ ಭಾಗದಲ್ಲಿ ಕಾರ್ಯಕರ್ತರು ದಂಗೆ ಹೇಳಲಿದ್ದಾರೆ. ಅಲ್ಲಲ್ಲಿ ಪ್ರತಿಭಟನೆಗಳಂತಹ ಪ್ರತಿರೋಧವನ್ನು ಪಕ್ಷವು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾ. ಪಂ ಮಾಜಿ ಅಧ್ಯಕ್ಷ ಎಚ್.ಎನ್.ಉಮೇಶ್ ಸೇರಿದಂತೆ ತಾಲೂಕು ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೋತ್ತೆಗಾಲ ಬಸವರಾಜು ಹಾಗೂ ಕೆಡಿಪಿ ಸದಸ್ಯ ಚಂದ್ರಧರ ಮಾತನಾಡಿ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರನ್ನು ವಿನಂತಿಸಿಕೊಂಡರು. ಸಭೆಯಲ್ಲಿ ತಾ.ಪಂ ಮಾಜಿ ಸದಸ್ಯ ರಾಮಲಿಂಗಯ್ಯ, ಪ.ಪಂ ಮಾಜಿ ಅಧ್ಯಕ್ಷ ಎನ್. ಮಹದೇವಸ್ವಾಮಿ, ಗ್ರಾ ಪಂ ಮಾಜಿ ಅಧ್ಯಕ್ಷರಾದ ಅಕ್ಕೂರು ಗುರುಮೂರ್ತಿ, ನಾಗರಾಜು ಚೀಕ, ರವಿಪ್ರಸಾದ್, ಮಹದೇವಸ್ವಾಮಿ, ಚಿಕ್ಕಣ್ಣ, ಮಲಿಯೂರು ದೋಳ್ಳಯ, ಮಾಜಿ ಸದಸ್ಯರಾದ ಕನ್ನಳ್ಳಿ ಲಕ್ಷ್ಮಣ, ಕಲಿಯೂರು ಶಿವಣ್ಣ, ಕೆಂಪನಪುರ ಮಹದೇವ, ಗಂಗೇಶ, ಚಿಕ್ಕಮಾದ ನಾಯಕ(ಮೋಹನ), ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್, ಕರೋಹಟ್ಟಿ ಪ್ರವೀಣ್, ಮುಖಂಡರಾದ ಕೇತಹಳ್ಳಿ ಸಿದ್ದಶೆಟ್ಟಿ, ಗೂಳಿ ದೇವರಾಜ್, ಶಂಕರ, ರಂಗಸ್ವಾಮಿ ಕಾವಾಲಿ, ಮಣಿ, ಶಂಕರೇಗೌಡ, ಸಿದ್ದ, ಶಿವಣ್ಣ, ಕೋಣಗಳ್ಳಿ ನಾಗರಾಜು ಹಾಗೂ ಇತರರು ಇದ್ದರು.