Home Uncategorized ಡಿಸೆಂಬರ್ ಅಂತ್ಯದೊಳಗೆ  ರಾಜ್ಯದ ವಿವಿಗಳಿಗೆ ಏಕರೂಪ ಕಾಯ್ದೆ: ರಾಯರೆಡ್ಡಿ

ಡಿಸೆಂಬರ್ ಅಂತ್ಯದೊಳಗೆ  ರಾಜ್ಯದ ವಿವಿಗಳಿಗೆ ಏಕರೂಪ ಕಾಯ್ದೆ: ರಾಯರೆಡ್ಡಿ

* 3000 ಪ್ರಾಧ್ಯಾಪಕರ ನೇಮಕಾತಿ * ಪರೀಕ್ಷೆ ಬರೆದ 15 ದಿನದಲ್ಲಿ ಫಲಿತಾಂಶ * ವಿವಿಗಳಿಗೆ ಹಣಕಾಸಿನ ಕೊರತೆ ಇಲ್ಲ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಅ.25 : ರಾಜ್ಯದ 32 ಸರ್ಕಾರಿ ವಿಶ್ವವಿದ್ಯಾಲಯಗಳ ಹಣಕಾಸು, ಶೈಕ್ಷಣಿಕ ಹಾಗೂ ಮೂಲಸೌಕರ್ಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ವಿಶ್ವವಿದ್ಯಾಲಯದಲ್ಲಿ ಹಣಕಾಸಿನ ಕೊರತೆ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ಕಿಷ್ಕಿಂದ ವಿವಿಯಲ್ಲಿ ನಿನ್ನೆ ತಮ್ಮನ್ನು ಭೇಟಿ ಮಾಡಿದ  ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಳ್ಳಾರಿ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷ 116 ಕೋಟಿ ರೂ., ಕೊಪ್ಪಳ ವಿಶ್ವವಿದ್ಯಾಲಯದಲ್ಲಿ 34 ಕೋಟಿ ರೂ. ಹೆಚ್ಚುವರಿ ಹಣವಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) 1,000 ಕೋಟಿ ರೂ.ಗೂ ಅಧಿಕ ಹೆಚ್ಚುವರಿ ಹಣವಿದೆ ಎಂದರು.

ನಾಲ್ಕು ವಿವಿಗಳಲ್ಲಿ ಪಿಂಚಣಿ ಸಮಸ್ಯೆ:

ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ (ಎಚ್ಆರ್ಎಂ) ಮತ್ತು ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ಸ್ಥಳೀಯ ಆಡಳಿತದ ನಿರ್ವಹಣೆಯಲ್ಲಿನ ಲೋಪಗಳಿಂದ ಈ ಸಮಸ್ಯೆಗಳು ಉಂಟಾಗಿವೆ. ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಣಕಾಸಿನ ಕೊರತೆಯಿಲ್ಲ. ಈ ವಿಶ್ವವಿದ್ಯಾಲಯ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅಂಗಸಂಸ್ಥೆ ಕಾಲೇಜುಗಳಿಲ್ಲದ ಕಾರಣ ಪ್ರವೇಶ ಮತ್ತು ಪರೀಕ್ಷಾ ಶುಲ್ಕದಿಂದ ಆದಾಯ ಬರುವುದಿಲ್ಲ ಎಂದರು.

ಡಿಸೆಂಬರ್ ಅಂತ್ಯದೊಳಗೆ ಏಕರೂಪ ಕಾಯ್ದೆ

ರಾಜ್ಯದ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ನಾಲ್ಕೈದು ಪ್ರತ್ಯೇಕ ಕಾಯ್ದೆಗಳಿವೆ. ಈ ಹಿನ್ನೆಲೆಯಲ್ಲಿ, ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವಂತೆ ‘ಒಂದು ವಿಶ್ವವಿದ್ಯಾಲಯ–ಒಂದು ಕಾಯ್ದೆ’ ರೂಪಿಸುವ ಮಸೂದೆ ತರಲು ಸರ್ಕಾರ ಉದ್ದೇಶಿಸಿದೆ. ಡಿಸೆಂಬರ್ ಅಂತ್ಯದೊಳಗೆ ಉನ್ನತ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಏಕರೂಪ ಕಾಯ್ದೆ ಹಾಗೂ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ತಿದ್ದುಪಡಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೊಪ್ಪಳ, ಬೀದರ್, ಕೊಡಗು, ಹಾವೇರಿ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆಯೂ ಚರ್ಚೆ ನಡೆಯಬೇಕಿದೆ. ಈ ಕುರಿತು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

3000 ಪ್ರಾಧ್ಯಾಪಕರ ನೇಮಕಾತಿ:

ರಾಜ್ಯದ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಖಾಲಿ ಇರುವ 3,000 ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ನೇಮಕಾತಿಗೆ ಹಣಕಾಸು ಇಲಾಖೆಯ ಅನುಮೋದನೆ ದೊರೆತಿದ್ದು, ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ.

ವಿಶ್ವವಿದ್ಯಾಲಯಗಳ ಗುಣಮಟ್ಟ ಸುಧಾರಣೆಗೆ ಕುಲಪತಿಗಳ ನೇಮಕಾತಿ ಭ್ರಷ್ಟಾಚಾರರಹಿತವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ. ಪರೀಕ್ಷೆ ಬರೆದ 15 ದಿನಗಳೊಳಗೆ ಫಲಿತಾಂಶ ಪ್ರಕಟಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸ್ಟಿಂಗ್ ಆಪರೇಷನ್:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಬುದ್ಧ ನಾಯಕರು. ಅವರ ಘನತೆಗೆ ಧಕ್ಕೆ ತರಲು ಕೆಲವರು ಸ್ಟಿಂಗ್ ಆಪರೇಷನ್ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಇಂದಿನ ರಾಜಕಾರಣದಲ್ಲಿ ಘನತೆ ಮತ್ತು ಗೌರವ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಅಧಿಕಾರವನ್ನು ಹಣ ಗಳಿಸುವ ಸಾಧನವಾಗಿ ನೋಡುವ ಪ್ರವೃತ್ತಿ ಹೆಚ್ಚಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಹಾಗೂ ಇತರರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ವ್ಯಕ್ತಿಗಳ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಬೀದಿಗೆ ತರುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಖಾಸಗಿ ಬದುಕು ಇರುತ್ತದೆ. ಅದಕ್ಕೆ ಗೌರವ ನೀಡಬೇಕು ಎಂದು ರಾಯರೆಡ್ಡಿ ಹೇಳಿದರು.