Home ಜಿಲ್ಲೆ ಮಂಗಳೂರು ಡಿಜಿಟಲ್ ಪಾವತಿ ಹೆಸರಿನಲ್ಲಿ ಅಂಗಡಿ ಮಾಲೀಕರಿಗೆ ವಂಚನೆ

ಡಿಜಿಟಲ್ ಪಾವತಿ ಹೆಸರಿನಲ್ಲಿ ಅಂಗಡಿ ಮಾಲೀಕರಿಗೆ ವಂಚನೆ

ಪುತ್ತೂರು: ಡಿಜಿಟಲ್ ಪಾವತಿ ಹೆಸರಿನಲ್ಲಿ ಅಂಗಡಿ ಮಾಲೀಕರೊಬ್ಬರಿಗೆ ಗ್ರಾಹಕರ ಸೋಗಿನಲ್ಲಿ ಬಂದಿರುವ ವ್ಯಕ್ತಿಯೋರ್ವ ನಗದು ಪಡೆದು ವಂಚನೆ ನಡೆಸಿರುವ ಪ್ರಕರಣ ಬುಧವಾರ ಸಂಜೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ..
ಇಲ್ಲಿನ ಗಾಣಿಗ ಆಯಿಲ್ ಮಿಲ್‌ನಲ್ಲಿ ಈ ವಂಚನೆ ಪ್ರಕರಣ ನಡೆದಿದ್ದು, ಹೆಲ್ಮೆಟ್ ಧರಿಸಿಕೊಂಡು ಸ್ಕೂಟರ್‌ನಲ್ಲಿ ಬಂದು ಇಳಿದ ಅಪರಿಚಿತ ವ್ಯಕ್ತಿಯೊಬ್ಬ, ತನ್ನ ಮುಖ ಕಾಣಿಸದಂತೆ ಹೆಲ್ಮಟ್ ಧರಿಸಿಕೊಂಡೇ ಅಂಗಡಿಗೆ ಪ್ರವೇಶಿಸಿದ್ದಾನೆ. ಬಳಿಕ ೨೦೦ ರೂಪಾಯಿ ಮೌಲ್ಯದ ತೆಂಗಿನ ಎಣ್ಣೆ ಖರೀದಿಸಿ, ತನಗೆ ಜರೂರಾಗಿ ೧,೦೦೦ ರೂಪಾಯಿ ನಗದು (ಕ್ಯಾಶ್) ಅಗತ್ಯವಿದೆ ಎಂದು ಅಂಗಡಿ ಮಾಲಕಿಯಲ್ಲಿ ವಿನಂತಿಸಿಕೊಂಡಿದ್ದಾನೆ. ಎಣ್ಣೆಯ ಬೆಲೆ ಸೇರಿ ಒಟ್ಟು ೧,೨೦೦ ರೂಪಾಯಿಯನ್ನು ತಕ್ಷಣವೇ ಗೂಗಲ್ ಪೇ ಮೂಲಕ ಪಾವತಿಸುವುದಾಗಿ ನಂಬಿಸಿದ್ದಾನೆ.
ಅತನ ಮಾತನ್ನು ನಂಬಿದ ಅಂಗಡಿ ಮಾಲಕಿಯು ರೂ. ೨೦೦ ಮೌಲ್ಯದ ತೆಂಗಿನ ಎಣ್ಣೆ ಹಾಗೂ ರೂ. ೧,೦೦೦ ನಗದನ್ನು ಆತನಿಗೆ ನೀಡಿದ್ದಾರೆ. ಈ ವೇಳೆ ತನ್ನ ಮೊಬೈಲ್‌ನಲ್ಲಿ ಹಣ ಪಾವತಿ ಮಾಡುವಂತೆ ನಟಿಸಿದ ಆ ವ್ಯಕ್ತಿ, ಕ್ಷಣಾರ್ಧದಲ್ಲಿ ಅಲ್ಲಿಂದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಬಳಿಕ ಪರಿಶೀಲಿಸಿದಾಗ ಖಾತೆಗೆ ಹಣ ಜಮೆಯಾಗದಿರುವುದು ಬೆಳಕಿಗೆ ಬಂದಿದೆ. ಅಂಗಡಿಯವರಿಗೆ ಘಟನೆಯುದ್ದಕ್ಕೂ ಆತ ಹೆಲ್ಮಟ್ ಕಳಚದೆ ಮುಖ ಮರೆಸಿಕೊಂಡೇ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.