ಬೆಂಗಳೂರು, ಆ. ೨೮ –ಮೈಸೂರಿನ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಖಂಡನಾರ್ಹ. ಅವರು ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಕುಟುಂಬವನ್ನು ಖುಷಿಪಡಿಸಲು ಈ ಹೇಳಿಕೆ ಕೊಟ್ಟಿದ್ದಾರೆ. ಗಾಂಧಿ ಕುಟುಂಬವನ್ನು ಖುಷಿಪಡಿಸಿ ಮುಖ್ಯಮಂತ್ರಿ ಗಾದಿಯಲ್ಲಿ ಕೂರಲು ಈ ರೀತಿ ಹೇಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳುವ ಮೂಲಕ ಹಿಂದೂಗಳಿಗೆ ಅಪಮಾನ ಮಾಡಿದ್ದಾರೆ. ಈ ಹೇಳಿಕೆಯನ್ನು ಹಿಂದೂಗಳು ಒಪ್ಪುವುದಿಲ್ಲ. ತಕ್ಷಣ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೋರಲಿ ಎಂದು ಒತ್ತಾಯಿಸಿದರು.
ದೆಹಲಿಯಿಂದ ಒತ್ತಡ ಬಂತು ಎಂದು ನಮಸ್ತೆ ಸದಾ ವತ್ಸಲೆ ಗೀತೆ ಹಾಡಿದ್ದ ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಿದರು ಈಗ ಹಿಂದೂಗಳಿಗೆ ಅಪಮಾನವಾಗುವ ರೀತಿಯಲ್ಲಿ ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದಲ್ಲ ಎಂದು ಹೇಳಿಕೆ ನೀಡಿದ್ದಾರೆ. ಏನಾದರೂ ಹೇಳಿ ಹಿಂದೂಗಳಿಗೆ ಅಪಮಾನ ಮಾಡುವುದನ್ನು ಭಗವಂತ ಮೆಚ್ಚಲ್ಲ. ಪದೇ ಪದೇ ಹಿಂದೂಗಳ ಭಾವನೆಗಳಿಗೆ ಕಾಂಗ್ರೆಸ್‌ನವರು ಧಕ್ಕೆ ತರುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್‌ನದ್ದು ಒಡೆದು ಆಳುವ ನೀತಿ ಎಂದು ದೂರಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದ್ದರೂ ಕಾಂಗ್ರೆಸ್‌ನವರು ಸುಮ್ಮನೆ ಕುಳಿತಿದ್ದಾರೆ. ಇದುವರೆಗೂ ಒಂದು ಎಫ್‌ಐಆರ್ ಮಾಡಿಲ್ಲ ಧರ್ಮಸ್ಥಳದ ಪ್ರಕರಣ ಇಟ್ಟುಕೊಂಡು ಹಿಂದೂಗಳ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಈ ಬಗ್ಗೆ ಎನ್‌ಐಎ ತನಿಖೆ ಆಗಬೇಕು ಎಂಬುದು ಸಮಸ್ತ ಹಿಂದೂಗಳ ನಿಲುವಾಗಿದೆ ಎಂದರು.
ಧರ್ಮಸ್ಥಳ ವಿಚಾರದಲ್ಲಿ ಇನ್ನು ಎಷ್ಟು ದಿನ ಹುಚ್ಚಾಟ ಮಾಡುತ್ತೀರಾ, ಎನ್‌ಐಎ ಅಥವಾ ಸಿಬಿಐ ತನಿಖೆ ಆಗಲಿ ಎಂದು ಅವರು ಪ್ರಶ್ನಿಸಿದರು. ಮೈಸೂರು ದಸರಾದ ಉದ್ಘಾಟನೆಗೆ ಭಾನು ಮುಸ್ತಾಕ್ ಅವರನ್ನೇ ಏಕೆ ಆಯ್ಕೆ ಮಾಡಿದರು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟನೆ ನೀಡಬೇಕು. ಭಾನು ಮುಸ್ತಾಕ್ ಜತೆ ದೀಪಾ ಬಸ್ತೀ ಅವರಿಗೂ ಬೂಕರ್ ಪ್ರಶಸ್ತಿ ಬಂದಿದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭಾನು ಮುಸ್ತಾಕ್ ಅವರನ್ನು ಮಾತ್ರ ಕರೆದು, ದೀಪಾ ಬಸ್ತಿ ಅವರನ್ನು ಕರೆದಿಲ್ಲ. ದೀಪಾ ಬಸ್ತಿ ಅವರನ್ನು ಕರೆಯಬೇಕಿತ್ತು ಎಂದು ಅವರು ಹೇಳಿದರು.
ದೀಪಾ ಬಸ್ತಿ ಅವರನ್ನು ದಸರಾ ಉದ್ಘಾಟನೆಗೆ ಏಕೆ ಕರೆದಿಲ್ಲ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಕೊಡಬೇಕು. ಇವರ ಅಜೆಂಡಾ ಏನು. ಭಾನು ಮುಸ್ತಾಕ್ ಅವರನ್ನು ಮಾತ್ರ ಕರೆದಿರುವ ಹಿಂದಿನ ಉದ್ದೇಶ ಏನಿದೆ. ಇದರಲ್ಲಿ ದುರುದ್ಧೇಶ ಇದೆಯೇ ಎಲ್ಲವನ್ನೂ ಸ್ಪಷ್ಟಪಡಿಸಲಿ ಎಂದು ವಿಜಯೇಂದ್ರ ಒತ್ತಾಯಿದರು.



























