ಸಂಜೆವಾಣಿ ನ್ಯೂಸ್
ಮೈಸೂರು: ಸೆ.15:- ಕನ್ನಡದ ಶಿಖರ ಸಾಹಿತಿ ಮಾಸ್ತಿ. ಮೃದು ಸ್ವಭಾವದ ಮಾಸ್ತಿ ಜೀವನ ಚರಿತ್ರೆಯನ್ನು ಸಮಗ್ರವಾಗಿ ಕಟ್ಟಿಕೊಡುವ ಮೂಲಕ ಮುಂದಿನ ಪೀಳಿಗೆಗೆ ಸಾಹಿತ್ಯ ಲೋಕದಲ್ಲೊಂದು ದೀಪಸ್ತಂಭವನ್ನು ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಅವರು ನಿರ್ಮಿಸಿದ್ದಾರೆ ಎಂದು ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಬಣ್ಣಿಸಿದರು.
ಡಿಎನ್ಕೆ ಸ್ನೇಹ ಬಳಗ, ಮೈಸೂರು ಕನ್ನಡ ವೇದಿಕೆ, ಸ್ವಜನ್ಯ ಸಾಹಿತ್ಯ ಕಲಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಗೋಪಾಲಸ್ವಾಮಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ಅವರ ಮಹಾಚೈತನ್ಯ, ವಿಮೋಚನೆ ಮತ್ತು ವಿಜಯಯಾತ್ರೆ ಎಂಬ ಮೂರು ಸಾಹಿತ್ಯ ಕೃತಿಗಳ ಬಿಡುಗಡೆ ಹಾಗೂ ಸನ್ಮಾನ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾಸ್ತಿ ಅವರು ಸಣ್ಣ ಕಥೆಗಳನ್ನು ಬರೆದು ಅದರಲ್ಲೇ ಕುದುರೆ, ಆನೆಗಳನ್ನು ಸೃಷ್ಟಿಸಿದರು. ಅವರು ಸಣ್ಣ ಕಥೆಗಳ ಜನಕರಷ್ಟೇ ಅಲ್ಲ, ಅಣ್ಣನೂ ಹೌದು, ಕುವೆಂಪು, ಬೇಂದ್ರೆ ಅವರಿಗೆ ಮಾರ್ಗದರ್ಶಕರಾಗಿದ್ದರು. ಕುವೆಂಪು ಅವರ ಕೊಳಲು ಕವನ ಸಂಕಲನ ಮಾಸ್ತಿ ಅವರ ಮಾರ್ಗದರ್ಶನದಲ್ಲಿ ಪ್ರಕಟವಾಯಿತು. ಜಯ ಭಾರತ ಜನನಿಯ ತನುಜಾತೆ ಕವನ ಅದರಲ್ಲಿದೆ. ಆ ಲೆಕ್ಕದಲ್ಲಿ ನೋಡಿದರೆ ಮಾಸ್ತಿಯವರಿಗೂ ನಾಡಗೀತೆಯ ಶ್ರೇಯ ಲಭಿಸಬೇಕಿತ್ತು ಎಂದರೆ ಉತ್ಪ್ರೇಕ್ಷೆಯಾಗಲಾರದು ಎಂದರು.
ಉನ್ನತ ಅಧಿಕಾರಿಯಾಗಿ ಜನಸೇವೆ ಹಾಗೂ ಸಾಹಿತ್ಯ ಸೇವೆ ಮಾಡಿದವರು ಮಾಸ್ತಿ, ಪ್ಲೇಗಿನ ಕಾಲದಲ್ಲಿ ಅವರು ಸಾಹಿತ್ಯ ಸೇವೆ ಅನನ್ಯ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಎಲ್ಲ ಪ್ರಕಾರದಲ್ಲೂ ಕೆಲಸ ಮಾಡಿದವರು, ಅವರು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದ, ವಸ್ತುನಿಷ್ಠ ಸಂಪಾದಕೀಯಕ್ಕೆ ಅವರು ಹೆಸರಾಗಿದ್ದರು ಎಂದರು.
ಸಾಹಿತಿ, ಸಂಸ್ಕೃತಿ ಚಿಂತಕ ಕಬ್ಬಿನಾಲೆ ವಸಂತ್ ಭಾರಧ್ವಾಜ್ ಮಾತನಾಡಿ, ಡಿಎನ್ಕೆ ಅವರ ವಿಮೋಚನಾ ಕಾದಂಬರಿ ಶ್ರೇಷ್ಠ ಮಟ್ಟದ್ದಾಗಿದೆ. ಅವರು ಗ್ರಾಮ್ಯ ಭಾಷೆಯಲ್ಲೇ ಗ್ರಾಮೀಣ ಬದುಕನ್ನು ಚನ್ನಾಗಿ ಕಟ್ಟಿಕೊಂಡಿದ್ದಾರೆ. ನಗರ ಜೀವನ ಲಭಿಸುವ ಅರ್ಹತೆ ಇದ್ದರೂ ಹಳ್ಳಿಯ ಪುರುಷನನ್ನೇ ವರಿಸಿ, ಜೀವನ ನಡೆಸುವ ತ್ಯಾಗಮಯಿ ಹೆಣ್ಣಿನ ಚಿತ್ರ ಕಾದಂಬರಿಯ ಕಥಾ ವಸ್ತು. ಆಕೆ ಬಂಜೆ ಎಂಬ ಪಟ್ಟದಿಂದ ವಿಮೋಚನೆ ಹೊಂದಲು ಪರ ಪುರುಷನ ಜತೆ ಸಂಬಂಧ ಹೊಂದಿ ಮಗು ಪಡೆಯುವುದನ್ನು ಡಿಎನ್ಕೆ ಅವರು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಸುಮಾರು 35 ಕೃತಿಗಳನ್ನು ರಚಿಸಿರುವ ಕೃಷ್ಣಮೂರ್ತಿ ಅವರನ್ನು ಸರ್ಕಾರ ಗುರುತಿಸಿ ಇದುವೆರೆಗೂ ಪ್ರಶಸ್ತಿ, ಪುರಸ್ಕಾರ ನೀಡದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.
ಶಾಸಕ ಶ್ರೀವತ್ಸ, ಮಾಜಿ ಸಚಿವ ಜಿ.ಟಿ.ದೇವೇಗೌಡ, ಸಮಾಜ ಸೇವಕ ಮೈ.ವಿ.ರವಿಶಂಕರ್ ಅವರು ಡಿಎನ್ಕೆ ಅವರ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದರು.
ಇದೇ ವೇಳೆ ಸಾಹಿತಿ ಡಿ.ಎನ್.ಕೃಷ್ಣಮೂರ್ತಿ ದಂಪತಿಯನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಸನ್ಮಾನಿಸಿದರು. ಡಿಎನ್ಕೆ ಸ್ನೇಹ ಬಳಗದ ಎಂ.ಆರ್.ಚಂದ್ರಶೇಖರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಸ್ವಜನ್ಯ ಸಾಹಿತ್ಯ ಕಲಾ ವೇದಿಕೆಯ ಶಿಶಿರಂಜನ್, ಉಪನ್ಯಾಸಕ ಹೊನ್ನಲಗೆರೆ ರಾಜೇಂದ್ರ ಪ್ರಸಾದ್, ಕನ್ನಡಪರ ಹೋರಾಟಗಾರ ನಾಲಾಬೀದಿ ರವಿ ಮತ್ತಿತರರು ಹಾಜರಿದ್ದರು.




























