ಡಿಂಗ್ರಿ ನಾಗರಾಜ್ ಗೆ  ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ.ಆ.3:
ಇಲ್ಲಿನ  ರಾಘವ ಕಲಾ ಮಂದಿರದಲ್ಲಿ ನಿನ್ನೆ ರಾಘವ ಮೆಮೋರಿಯಲ್ ಅಸೋಸಿಯೇಷನ್  ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 145ನೇ ಜಯಂತಿ ಅಂಗವಾಗಿ ರಾಜ್ಯ ಪ್ರಶಸ್ತಿ ಪ್ರದಾನ ,ಪುಸ್ತಕ ಬಿಡುಗಡೆ, ನಾಟಕೋತ್ಸವ  ಸಮಾರಂಭವ ಹಮ್ಮಿಕೊಂಡಿತ್ತು.
ಈ ಸಾಲಿನ ರಾಜ್ಯಮಟ್ಟದ “ಬಳ್ಳಾರಿ ರಾಘವ”  ಪ್ರಶಸ್ತಿಯನ್ನುರಂಗಭೂಮಿ,ಚಲನಚಿತ್ರ ನಟ  ಡಿಂಗ್ರಿ ನಾಗರಾಜ ರವರಿಗೆ ನೀಡಿ ಗೌರವಿಸಲಾಯಿತು.
ಸಮಾರಂಭ ಉದ್ಘಾಟನೆ ಮಾಡಿದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಸಚಿವ  ಸಿ .ನಾಗರಾಜ್  ರಾಘವರು ನೂರಾರು ನಾಟಕಗಳಲ್ಲಿ ತಮ್ಮ ಅಭಿನಯ,ಸಂಭಾಷಣೆಯಿಂದ  ದೇಶಾದ್ಯಂತ ಅಸಂಖ್ಯಾತ ಜನರ ಅಭಿಮಾನ ಪ್ರೀತಿಯನ್ನು ಗಳಿಸಿದ್ದರೆಂದು  ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ,ಲೇಖಕ ಸಿದ್ದರಾಮ ಕಲ್ಮಠ ಮಾತನಾಡಿ,  ಭಾರತೀಯ ರಂಗಭೂಮಿ  ಕಂಡ ಧೀಮಂತ ನಟ ಬಳ್ಳಾರಿ ರಾಘವರು.ಅವರು ತಮ್ಮ ಹೊಸ ಅಲೆಯ ನಾಟಕಗಳಿಂದ ಅಂದಿನ ರಂಗಭೂಮಿಗೆ ಆಧುನಿಕತೆಯ ಸ್ಪರ್ಶ ನೀಡಿದರು.ಕನ್ನಡ ,ತೆಲುಗು ನಾಟಕಗಳಲ್ಲಿ ಅನೇಕ ಬದಲಾವಣೆಗಳಾದವು.ಅವರೊಬ್ಬ ಬಹುಭಾಷೆಗಳ ನಟ.ನಾಟಕಕಾರ,ನಿರ್ದೇಶಕ, ವೃತ್ತಿಯಲ್ಲಿ ವಕೀಲರಾಗಿದ್ದರೂ ಸಮಾಜಸುಧಾರಣೆಗೆ ನಾಟಕಗಳು ಮುಖ್ಯವೆಂದು ಭಾವಿಸಿದರು.ಅವರು ನಾಟಕಗಳು ಸಮಕಾಲೀನ ಸಮಾಜವನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದ್ದರೆಂದರು.
 ಅಸೋಸಿಯೇಷನ್ ನ ಗೌರವಾಧ್ಯಕ್ಷ ಕೆ.ಚನ್ನಪ್ಪ ಅವರು ಸಿದ್ದರಾಮ ಕಲ್ಮಠ ರಚಿಸಿದ  ” ರಂಗಭೂಮಿಯ ಅನರ್ಘ್ಯ ರತ್ನ ಬಳ್ಳಾರಿ ರಾಘವ ” ಕೃತಿ ಬಿಡುಗಡೆ ಮಾಡಿದರು.ಅವರು ರಾಘವರ ಆದರ್ಶ ರಂಗ ಪರಂಪರೆಯನ್ನು ಉಳಿಸಿ ಬೆಳೆಸೋಣ ಎಂದರು.
ವೇದಿಕೆ ಮೇಲೆ ಅಸೋಸಿಯೇಷನ್ ಅಧ್ಯಕ್ಷ ಕೆ ಕೋಟೇಶ್ವರರಾವ್, ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ್, ಹೆಚ್ ವಿಷ್ಣುವರ್ಧನ ರೆಡ್ಡಿ ಕಾರ್ಯದರ್ಶಿ ಎನ್. ಪ್ರಕಾಶ್, ಖಜಾಂಜಿ ಈ. ಧನಂಜಯ ,ಜಂಟಿ ಕಾರ್ಯದರ್ಶಿ ಎಂ. ರಾಮಾಂಜನೇಯಲು ಉಪಸ್ಥಿತರಿದ್ದರು.
ನಂತರ ಧಾರವಾಡದ ಕಲಾಸಂಗಮ ಸಂಸ್ಥೆಯಿಂದ   ವೀರೇಶ ಬಳಗಾಲಪೇಟ್ ರಚನೆಯ ಪ್ರಭು ಹಂಚಿನಾಳ ನಿರ್ದೇಶನದ “ಸಮರಸಿಂಹ ಸಂಗೊಳ್ಳಿ ರಾಯಣ್ಣ”  ಕನ್ನಡ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಲಾಚಲಂ ಸಂಧ್ಯಾ ಪ್ರಾರ್ಥಸಿದರು.  ಕೆ ಕೋಟೇಶ್ವರರಾವ್ ಸ್ಚಾಗತಿಸಿದರು.ಎಂ. ರಾಮಾಂಜನೇಯಲು ವಂದಿಸಿದರು.  ವಿಷ್ಣು ಹಡಪದ ನಿರೂಪಿಸಿದರು.ರಮಣಪ್ಪ ಭಜಂತ್ರಿ  ನಿರ್ವಹಿಸಿದರು.