ಡಾ.ನೇಮಿಚಂದ್ರ ಅವರಿಗೆ ಸುಶ್ರುತ ಪ್ರಶಸ್ತಿ ಪ್ರದಾನ

ಸಂಜೆವಾಣಿ ನ್ಯೂಸ್
ಮೈಸೂರು: ಅ.15:-
ರೋಗಿಗಳ ಬಗ್ಗೆ ಕಾಳಜಿ, ಕರ್ತವ್ಯದ ಬಗ್ಗೆ ಬದ್ಧತೆ, ಸಮರ್ಪಣಾ ಮನೋಭಾವ, ರೋಗ ಗುಣಪಡಿಸಲು ಸಾಧ್ಯವಿರುವ ಎಲ್ಲ ಚಿಕಿತ್ಸೆಗಳನ್ನು ಮಾನವೀಯ ನೆಲೆಯಲ್ಲಿ ನೀಡುತ್ತಿರುವ ಡಾ.ನೇಮಿಚಂದ್ರ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಭಾರತ ಸರ್ಕಾರದ ಮಾಜಿ ಪ್ರಧಾನ ವೈಜ್ಞಾನಿಕ ಸಲಹೆಗಾರ ಪೆÇ್ರ.ಕೆ.ವಿಜಯರಾಘವನ್ ಹೇಳಿದರು.


ನಗರದ ಜೆಎಸ್‍ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಭ್ರಮರ ಟ್ರಸ್ಟ್ ಸಹಯೋಂಗದೊಂದಿಗೆ 2025ನೇ ಸಾಲಿನ ಸುಶ್ರುತ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾರಾಯಣೋ ಹರಿ ಎಂಬ ಮಾತು ನಶಿಸಿ ಹೋಗುವ ಕಾಲ ಬಂದಿದೆ ಎಂಬ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಸಂವಹನದ ಕೊರತೆ, ಅರ್ಥ ಮಾಡಿಕೊಳ್ಳುವಿಕೆಯಲ್ಲಿನ ಸಮಸ್ಯೆಯೋ ಏನೋ, ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಅಭಿಪ್ರಾಯಪಟ್ಟರು.


ವೈದ್ಯರು ಅಂತಃಕರಣ, ಸಹಾನೂಭೂತಿ ಬೆಳೆಸಿಕೊಳ್ಳಬೇಕು. ವೈದ್ಯ ಸಾಹಿತ್ಯವನ್ನು ಓದುವ ಆಸಕ್ತಿ ರೂಢಿಸಿಕೊಳ್ಳುವುದು ಒಳ್ಳೆಯದು ವೈದ್ಯರ ಬಗ್ಗೆ ಜನರಲ್ಲಿ ಅಪಾರ ಗೌರವ ಭಾವನೆ ಇದೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಮಮತೆ, ಪ್ರೀತಿಯಿಂದ ಮಾತನಾಡಿದರೆ ವೈದ್ಯರ ಬಗ್ಗೆ ನಂಬಿಕೆ ಮತ್ತು ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ ಎಂದು ಸಲಹೆ ನೀಡಿದರು.


ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಎಚ್.ಬಸವನಗೌಡಪ್ಪ ವಾತನಾಡಿ, ಭ್ರಮರ ಟ್ರಸ್ಟ್ ವತಿಯಿಂದ ವೈದ್ಯರು ರೋಗಿಗಳಿಗೆ ನೀಡುವ ಮಾನವೀಯ ಸೇವೆ ಗುರುತಿಸಿ ರೋಗಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಸುಶ್ರುತ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಷಯ ಎಂದರು.


ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ಭ್ರಮರ ಟ್ರಸ್ಟ್ ದತ್ತಿಯಿಂದ ಮೊತ್ತಮೊದಲ ಬಾರಿಗೆ 2025ನೇ ಸಾಲಿನ ಸುಶ್ರುತ ಪ್ರಶಸ್ತಿಯನ್ನು ವೈದ್ಯಕೀಯ ಕ್ಷೇತ್ರದ ಸೇವೆ ಗುರುತಿಸಿ ಡಾ.ನೇಮಿಚಂದ್ರ ಅವರಿಗೆ ನೀಡುತ್ತಿರುವುದು ಸಂತಸದ ವಿಷಯ. ಭ್ರಮರ ಟ್ರಸ್ಟ್ ಸವಾಜಮುಖಿ ಸೇವೆಗಳಿಗೆ ಹೆಸರುವಾಸಿಯಾಗಿದ್ದು 2004ರಲ್ಲಿ ಸುನಾಮಿಯಿಂದ ಮನೆ ಮಠ ಕಳೆದುಕೊಂಡ ನಿರಾಶ್ರಿತರಿಗೆ ತಮಿಳುನಾಡಿನಲ್ಲಿ ಮನೆ ನಿರ್ಮಿಸಲು ಆರ್ಥಿಕ ಸಹಾಯ, ಉತ್ತರ ಕರ್ನಾಟಕದ ಪ್ರವಾಹ ಸಂದರ್ಭದಲ್ಲಿ ಅಲ್ಲಿನ ನಿರಾಶ್ರಿತರಿಗೆ ಮನೆ ನಿರ್ಮಿಸಲು ಜೆಎಸ್‍ಎಸ್ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ ಹಾಗೂ ಕೊಡಗಿನಲ್ಲಿ ಪ್ರವಾಹ ಸಂದರ್ಭದಲ್ಲಿ ಕೂಡ ಅಲ್ಲಿನ ನಿರಾಶ್ರಿತರಿಗೆ ಸಹಾಯ ಮಾಡಿದ್ದಾರೆ ಎಂದು ಟ್ಟಸ್ಟ್ ಸೇವೆ ಸ್ಮರಿಸಿದರು.


ಜೆಎಸ್‍ಎಸ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಡಾ.ನೇಮಿಚಂದ್ರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಬದ್ಧತೆ ಇದ್ದರೆ ಗೌರವ ತನ್ನಿಂತಾನೇ ಸಿಗುತ್ತದೆ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವವರ ಮೇಲೆ ಹೆಚ್ಚು ಒತ್ತಡ ಇರುತ್ತದೆ. ಅದನ್ನು ನಿಭಾಯಿಸಬೇಕು. ವೈದ್ಯರಿಗೆ ನಿವೃತ್ತಿ ಎಂಬುದೇ ಇರುವುದಿಲ್ಲ. ದೈಹಿಕ ಮತ್ತು ಮಾನಸಿಕವಾಗಿ ಚೈತನ್ಯ ಇರುವವರೆಗೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಎಎಚ್‍ಇಆರ್ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಜೆಎಸ್‍ಎಸ್ ಮಹಾವಿದ್ಯಾಪೀಠದ ವೈದ್ಯಕೀಯ ಶಿಕ್ಷಣ ನಿರ್ದೇಶಕ ಆರ್.ಮಹೇಶ್, ಭ್ರಮರ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ವೈ.ಟಿ.ಮಾಧುರಿ ತಾತಾಚಾರಿ ಇದ್ದರು.