Home ಜಿಲ್ಲೆ ಮಂಗಳೂರು ‘ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ

‘ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ

ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೈನ್ ಅಲಿಯಾಸ್ “ಟ್ಯಾಬ್ಲೆಟ್ ಆರೀಫ್’ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಬಜಾಲ್ ನಂತೂರು ನಿವಾಸಿ, ಹಾಲಿ ಪಡೀಲ್‌ನ ವಿಜಯನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಮೊಹಮ್ಮದ್ ಇಬ್ರಾಹಿಂ ಸಿನಾನ್ ಅಲಿಯಾಸ್ ಚಿನ್ನು (೨೧) ಬಂಧಿತ ಆರೋಪಿಯಾಗಿದ್ದಾನೆ. ಈತ ಮೃತ ರೌಡಿಶೀಟರ್ “ಟೊಪ್ಪಿ ನೌಫಾಲ್’ ಎಂಬಾತನ ಸಹೋದರ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಇಬ್ರಾಹಿಂ ಸಿನಾನ್, ೨೦೨೬ರ ಫೆಬ್ರವರಿ ತಿಂಗಳಲ್ಲಿ ಆರೀಫ್ ಹುಸೇನ್ ಕೊಲೆಗೆ ಸಂಚು ರೂಪಿಸಿದ್ದ ವೇಳೆ ಭಾಗಿಯಾಗಿದ್ದ ಹಾಗೂ ಮಾರ್ಚ್ ೨೭ ರಂದು ನಡೆದ ಕೊಲೆ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಈತನ ವಿರುದ್ಧ ಈಗಾಗಲೇ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಸೇರಿದಂತೆ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.