ಸಂಜೆವಾಣಿ ನ್ಯೂಸ್
ಮೈಸೂರು: ಆ.05:- ಎಲ್ಲ ಸಮುದಾಯಗಳಲ್ಲೂ ಅತ್ಯುತ್ತಮ ಮಹನೀಯರು ಇದ್ದಾರೆ. ಅವರ ಇತಿಹಾಸ ಸ್ಮರಿಸಬೇಕು. ಟಿಪ್ಪು ಸುಲ್ತಾನ್ ಮಾಡಿದ ಸಾವಿರಾರು ತಪ್ಪುಗಳು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿವೆ. ಅಂತಹ ಹೆಸರನ್ನು ಬಳಸಿಕೊಂಡು ಮತದಾರರನ್ನು ಮೆಚ್ಚಿಸುವ ಅಗತ್ಯವಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಚ್.ಸಿ.ಮಹದೇವಪ್ಪ ಕೆಆರ್‍ಎಸ್ ಡ್ಯಾಂಗೆ ಟಿಪ್ಪು ಸುಲ್ತಾನ್ ಮೊದಲು ಅಡಿಗಲ್ಲು ಹಾಕಿದ್ದು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ರಾಜಕೀಯ ಅನುಕೂಲಕ್ಕಾಗಿ ತಪ್ಪು ಇತಿಹಾಸ ಸೃಷ್ಟಿಸಬೇಡಿ.
ಮಹದೇವಪ್ಪ ಅವರು ಭಾಷಣದಲ್ಲಿ ಹೇಳಿರುವ ಮಾತುಗಳು ನನ್ನ ಗಮನಕ್ಕೆ ಬಂದಿವೆ. ಇದೊಂದು ಹಾಸ್ಯಾಸ್ಪದ ಹೇಳಿಕೆ ಎಂದು ವ್ಯಂಗ್ಯವಾಡಿದರು.
ಕೆಆರ್‍ಎಸ್ ಅಣೆಕಟ್ಟೆ ಕಟ್ಟಿಸಲು ಪ್ರಾರಂಭದಿಂದ ಅಂತ್ಯದವರೆಗೆ ಯಾರು ಏನು ಮಾಡಿದ್ದಾರೆ ಎಂಬುದನ್ನು ಬಹಳ ಸ್ಪಷ್ಟವಾಗಿ ಇತಿಹಾಸದ ಪುಟಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇಂತಹ ಇತಿಹಾಸವನ್ನು ಮತದಾರರನ್ನು ಒಲೈಸಲು ಬಳಸಿಕೊಳ್ಳುವ ಅಗತ್ಯವಿಲ್ಲ. ಇತಿಹಾಸ ಮಾತನಾಡುವಾಗ ಸಾಕ್ಷಿ ಸಮೇತ ಹೇಳಬೇಕು. ನಿಮ್ಮ ಹೇಳಿಕೆಗೆ ಪೂರಕ ಸಾಕ್ಷ್ಯಗಳನ್ನು ಕೊಡಿ, ನಾವೂ ಒಪ್ಪಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು ಎಂದರು.
ಅನುಕೂಲಕ್ಕೆ ತಕ್ಕ ಇತಿಹಾಸ ಸೃಷ್ಟಿ: ಕಾಂಗ್ರೆಸ್ ಪ್ರಾರಂಭದಿಂದಲೂ ತನಗೆ ಅನುಕೂಲ ಆಗುವ ಇತಿಹಾಸವನ್ನೇ ಎಲ್ಲರಿಗೂ ಹೇಳುತ್ತಾ ಬಂದಿದೆ. ಇವತ್ತಿಗೂ ಕಾಂಗ್ರೆಸ್ಸಿಗರು ಅದನ್ನೇ ಮಂಡಿಸುತ್ತಿದ್ದಾರೆ. ನಿಜವಾದ ಇತಿಹಾಸ ಹೇಳಿರುವುದನ್ನು ನೋಡಿಯೇ ಇಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಹೋರಾಟ ಇದೆ. ಅದರ ಜತೆಯಲ್ಲೇ ಅನೇಕ ರೀತಿಯ ಹೋರಾಟಗಳು ನಡೆದಿವೆ. ಆದಿವಾಸಿಗಳೂ ಹೋರಾಟ ಮಾಡಿದ್ದರು. ಸುಭಾಷ್ ಚಂದ್ರಬೋಷ್ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆದಿದೆ. ಆದರೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಕಾಂಗ್ರೆಸ್ ತನಗೆ ಸಂಬಂಧಪಟ್ಟ ಇತಿಹಾಸವನ್ನು ಮಾತ್ರ ಸೃಷ್ಟಿಸಿತು ಎಂದು ತಿಳಿಸಿದರು.
ಕಾಂಗ್ರೆಸ್ ಕರ್ನಾಟಕದಲ್ಲೂ ಸ್ವಾತಂತ್ರ್ಯ ಪೂರ್ವದಲ್ಲಿ ಇತಿಹಾಸವನ್ನು ನಗಣ್ಯ ಮಾಡುತ್ತಿದೆ. ಹಿಂದಿನ ತಪ್ಪುಗಳನ್ನು ತಿಳಿದುಕೊಳ್ಳಲು ಹಾಗೂ ಉಜ್ವಲ ಭವಿಷ್ಯ ಕಟ್ಟಿಕೊಳ್ಳುವ ಸಲುವಾಗಿ ಇತಿಹಾಸವನ್ನು ಓದಬೇಕು ಎಂದರು.


























