
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು?ನೇರಳಕಟ್ಟೆ ಮಾರ್ಗದ ಶೇಟ್ಟರಕಟ್ಟೆ ತಿರುವಿನಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ನೇರಳಕಟ್ಟೆಯಿಂದ ತಲ್ಲೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಟಿಪ್ಪರ್ ವಾಹನವು ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್ಟಿಸಿ ಸರಕಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಬಲಭಾಗಕ್ಕೆ ತೀವ್ರ ಹಾನಿಯಾಗಿದ್ದು ಬಸ್ ನಜ್ಜು ಗುಜ್ಜಾಗಿದೆ.
ಅಪಘಾತದಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು ೧೫ ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ೭ ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಮೂರು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಕುಂದಾಪುರದ ಸರಕಾರಿ ಆಸ್ಪತ್ರೆ ಹಾಗೂ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.ಟಿಪ್ಪರ್ ಚಾಲಕ ರಾಘವೇಂದ್ರ ಎಂಬುವವರು ಕೂಡ ಗಾಯಗೊಂಡಿದ್ದು, ಅವರನ್ನು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.























