ಜ.16ರಿಂದ ಮೂರು ದಿನ ಭರತ ನಾಟ್ಯ ರಸ ಸಂಜೆ ಉತ್ಸವ

ಬೆಂಗಳೂರು, ಜ.13:- ವೆಂಕಟೇಶ ನಾಟ್ಯ ಮಂದಿರದಿಂದ ಜ. 16 ರಿಂದ ಮೂರು ದಿನಗಳ ವೈಭವದ ಅವಳಿ ಸಹೋದರಿಯರ ಭರತ ನಾಟ್ಯ ರಸ ಸಂಜೆ ಉತ್ಸವ ನಡೆಯಲಿದ್ದು, ಮೊದಲ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.


ಜ.17 ಮತ್ತು 18 ರಂದು ಎಡಿಎ ರಂಗ ಮಂದಿರದಲ್ಲಿ ಉಳಿದ ಎರಡು ದಿನಗಳ ಕಾಲ ಕಲಾವಿದರು ರಸದೌತಣ ಉಣಬಡಿಸಲಿದ್ದಾರೆ. ಹನ್ನೊಂದು ಕಲಾವಿದರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಅವಳಿ ಸಹೋದರಿಯರಾದ ಅರ್ಚನಾ-ಚೇತನಾ, ನಿವೇದಿತಾ ಭಾರದ್ವಾಜ್, ಡಾ.ಸಂಜಯ್, ಶಾಂತಾರಾಂ ಅವರ ಶಿವಪ್ರಿಯ ನೃತ್ಯಶಾಲೆ, ಚೆನ್ನೈನಿಂದ ಬರುತ್ತಿರುವ ಷಣ್ಮುಗಂ ಸುಂದರ್, ಅನೌಷ್ಕಾ ಪ್ರಭು (ಕಥಕ್), ಪೃಥ್ವಿ ಪಾರ್ಥಸಾರಥಿ, ಅವಿಜಿತ್ ಕುಂದು, ಅರ್ಚನಾ ಹೆಚ್.ಆರ್., ಶುಭಾ ಧನಂಜಯ್, ಮುದ್ರಾ ಧನಂಜಯ್, ದೀಪ್ತಿ, ಸತ್ಯಪ್ರಕಾಶ್, ವಂದ್ಯಾ ಶ್ರೀನಾಥ್ ಅವರ ಶಿಷ್ಯರ ಸಮೂಹ ಪ್ರದರ್ಶನ ಆಯೋಜನೆಗೊಂಡಿವೆ.


ಹಿರಿಯ ಭರತನಾಟ್ಯ ಗುರು ರಾಧಾ ಶ್ರೀಧರ್ ಅವರು 1969ರಲ್ಲಿ ಸ್ಥಾಪನೆ ಮಾಡಿದ ವೆಂಕಟೇಶ ನಾಟ್ಯ ಮಂದಿರ 56ವರ್ಷಗಳಿಂದ ನಿರಂತರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.