ಜ.೩; ಪಾಂಗಳಾಯಿ ಅರಸು ಮುಂಡ್ಯತ್ತಾಯ ನೇಮೋತ್ಸವ

ಪುತ್ತೂರು: ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವರ ಪುರಾಣ ಇತಿಹಾಸದ ಪ್ರಕಾರ ಮಹಾಲಿಂಗೇಶ್ವರ ದೇವರಿಗೆ ಎರಡನೇ ದಂಡನಾಯಕ ಎಂಬ ಖ್ಯಾತಿ ಪಡೆದಿರುವ ಅರಸು ಮುಂಡ್ಯತ್ತಾಯ ದೈವ ಪರ್ಲಡ್ಕದ ಪಾಂಗಳಾಯಿಯಲ್ಲಿ ನೆಲೆಯಾಗಿದ್ದು, ಜ.೩ರಂದು ಅರಸು ಮುಂಡ್ಯತ್ತಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ನಡೆಯಲಿದೆ ಎಂದು ಅರಸು ಮುಂಡ್ಯತ್ತಾಯ ದೈವಸ್ಥಾನದ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ ಕಲ್ಲಿಮಾರ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾರಣಿಕ ಸ್ಥಳವಾದ ಪಾಂಗಳಾಯಿಯಲ್ಲಿ ಕಳೆದ ೧೭ ವರ್ಷಗಳಿಂದ ಪಾಂಗಳಾಯಿ ನೇಮೋತ್ಸವ ನಿರಂತರವಾಗಿ ಅದ್ದೂರಿಯಾಗಿ ನಡೆಯುತ್ತಿದೆ. ಅರಸು ಮುಂಡ್ಯತ್ತಾಯ ಹಾಗೂ ಪರಿವಾರ ದೈವಗಳು ಮನುಷ್ಯನಿಗೆ ಬರುವ ಅಪಘಾತ, ದುರ್ಮರಣ, ಬೆಂಕಿ ಆಕಸ್ಮಿಕ ಮುಂತಾದ ಸರ್ವ ಅವಘಡಗಳಿಂದ ರಕ್ಷಣೆ ನೀಡುವ ದೈವಗಳಾಗಿದ್ದು, ಭಕ್ತರ ಅಭಿಲಾಷೆಯನ್ನು ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ನೇಮೋತ್ಸವದ ಜತೆಗೆ ವರ್ಷಾವಧಿ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ನಾಗತಂಬಿಲ ಮತ್ತು ಪರಿವಾರ ದೈವಗಳ ಪಾಂಗಳಾಯಿ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಪುತ್ತೂರು ನಗರದ ಕೇಂದ್ರ ಭಾಗದಲ್ಲಿರುವ ಈ ದೈವಗಳ ತಾಣದಲ್ಲಿ ಅರಸು ಮುಂಡ್ಯತ್ತಾಯ, ನಾಗದೇವರು, ನಾಗರಕ್ತೇಶ್ವರಿ, ಗುಳಿಗ, ಪಂಜುರ್ಲಿ ಹಾಗೂ ಪೊಟ್ಟನ್ ದೈವಗಳ ಸನ್ನಿಧಿಯಾಗಿದೆ. ಪುತ್ತೂರಿನ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ದೇವರ ಸವಾರಿ ಪಾಂಗಳಾಯಿ ಕಟ್ಟೆಗೆ ಆಗಮಿಸುತ್ತದೆ.
ಪಾಂಗಳಾಯಿ ದೈವಕ್ಷೇತ್ರದಲ್ಲಿ ಪ್ರತೀ ಸಂಕ್ರಮಣ ಪೂಜೆ, ತಂಬಿಲ ಸೇವೆ, ಪತ್ತನಾಜೆ, ನಾಗರಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಆಯುಧಪೂಜೆ, ಬಲಿಪಾಡ್ಯಮಿ ಕಾರ್ಯಕ್ರಮಗಳು ನಡೆಯುತ್ತಿವೆ. ವಿಶೇಷವಾಗಿ ಮಹಿಳಾ ಭಜನಾ ಸಂಘ ಹಾಗೂ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ಕಲಿಸುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಜ. ೨ ರಂದು ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ಸಂಜೆ ೬ರ ಅನಂತರ ದೇವತಾ ಪ್ರಾರ್ಥನೆ, ಆಚಾರ್ಯವರಣ, ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ. ಜ.೩ ರಂದು ಬೆಳಗ್ಗೆ ೭.೩೦ ರಿಂದ ಗಣಹೋಮ, ಕಲಶ ಪೂಜೆ, ನಾಗತಂಬಿಲ, ಸಾಮೂಹಿಕ ಆಶ್ಲೇಷಾ ಬಲಿ, ಪಂಚಾಮೃತ ಅಭಿಷೇಕ, ದೈವಗಳಿಗೆ ಕಲಶ ತಂಬಿಲ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾ ಪೂಜೆ ಅನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ ೫ ರಿಂದ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ. ಅರಸು ಮುಂಡ್ಯತ್ತಾಯ, ಗುಳಿಗ, ಪಂಜುರ್ಲಿ-ಕಲ್ಲುರ್ಟಿ, ಪಟ್ಟನ್ ದೈವ, ನಾಗರಕ್ತೇಶ್ವರಿ ನೇಮಗಳು ನಡೆಯಲಿವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರೋಜಿನಿ ಅಭಿಕಾರ್, ಮಾಜಿ ಅಧ್ಯಕ್ಷರಾದತಾರಾನಾಥ ರೈ, ಕೋಶಾಧಿಕಾರಿ ಜಯಶಂಕರ ರೈ, ಸದಸ್ಯರಾದ ಕರುಣಾಕರ ಆಲೆಟ್ಟಿ, ಪಿ.ಎಸ್.ರಾಜಗೋಪಾಲ ಶಗ್ರಿತ್ತಾಯ, ಪದಾಧಿಕಾರಿಗಳಾದ ಉಮಾಶಂಕರ್ ನಾಕ್ ಪಾಂಗಳಾಯಿ, ಸೂರಪ್ಪ ಗೌಡ, ಕರುಣಾಕರ ಆಲೆಟ್ಟಿ, ಸಂಪತ್ ಕುಮಾರ್ ಉಪಸ್ಥಿತರಿದ್ದರು.