ಜ.೧೦; ಈಶ್ವರಮಂಗಲದಲ್ಲಿ ಆದರ್ಶವಿವಿಧೋದ್ದೇಶ ಸಹಕಾರ ಸಂಘದ ೧೭ನೇ ಶಾಖೆ ಉದ್ಘಾಟನೆ

oplus_2

ಪುತ್ತೂರು; ಸಹಕಾರಿ ಕ್ಷೇತ್ರದಲ್ಲಿ ಯಶಸ್ವೀ ೨೩ ವರ್ಷಗಳ ಸೇವೆಯೊಂದಿಗೆ ಸತತ ೬ ಬಾರಿಗೆ ಸಾಧನಾ ಪ್ರಶಸ್ತಿ ಪಡೆದುಕೊಂಡಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೧೭ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಜ.೧೦ರಂದು ಈಶ್ವರಮಂಗಲದಲ್ಲಿ ನಡೆಯಲಿದೆ. ಸಂಘಕ್ಕೆ ೨೫ ವರ್ಷ ತುಂಬುವುದರೊಳಗೆ ಸಂಘ ೨೦ ಶಾಖೆಗಳನ್ನು ಹಾಗೂ ರೂ.೨೦೦ ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಿದೆ ಎಂದು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರರತ್ನ ಸವಣೂರು ಸೀತಾರಾಮ ರೈ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೩೦೯೦೦ ಸದಸ್ಯರನ್ನು ಹೊಂದಿರುವ ಸಂಘ ಪ್ರಸ್ತುತ ಸಾಲಿನಲ್ಲಿ ೮೨೯.೮೮ ಕೋಟಿ ವ್ಯವಹಾರವನ್ನು ನಡೆಸುವ ಮೂಲಕ ರೂ.೨.೦೧ ಕೋಟಿ ಲಾಭಾಂಶ ಗಳಿಸಿದೆ. ಸಂಘವು ರೂ.೧೬೧ ಕೋಟಿ ರೇವಣಿಯನ್ನು ಹೊಂದಿದೆ. ರೂ.೧೪೩ ಕೋಟಿ ಸಾಲ ವಿತರಿಸಿದೆ. ರೂ.೩.೪೪ ಕೋಟಿ ಪಾಲು ಬಂಡವಾಳವನ್ನು ಸಂಘ ಹೊಂದಿದೆ. ಅವಿಭಜಿತ ದಕ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಹಾಗೂ ಉತ್ತಮ ವಿವಿಧೋದ್ದೇಶ ಸಹಕಾರ ಸಂಘ ಎಂಬ ಪ್ರಶಸ್ತಿಗೂ ಪಾತ್ರವಾಗಿದೆ. ಆರಂಭದಿಂದಲೇ ‘ಎ’ ವರ್ಗದ ಶ್ರೇಷ್ಟತೆಯನ್ನು ಕಾಪಾಡಿಕೊಂಡು ಬಂದು ಸದಸ್ಯರಿಗೆ ಶೇ.೧೦ಕ್ಕಿಂತ ಮೇಲ್ಪಟ್ಟು ಡಿವಿಡೆಂಟ್ ನೀಡಿದ ಏಕೈಕ ಸಂಘವಾಗಿದೆ. ಸಮಾಜಸೇವೆಯ ಭಾಗವಾಗಿ ೧೫೪೫ ಮಕ್ಕಳಿಗೆ ರೂ.೩೧.೧೨ ಲಕ್ಷ ಉಚಿತ ಹಾಗೂ ವಿದ್ಯಾನಿಧಿಯನ್ನು ವಿತರಿಸಿದೆ ಎಂದವರು ತಿಳಿಸಿದರು.
ಈಗಾಗಲೇ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿರೋಡ್ ಕಲ್ಲಡ್ಕ ಹಾಗೂ ಪಾಂಡೇಶ್ವರದಲ್ಲಿ ಶಾಖೆಗಳನ್ನು ಹೊಂದಿರುವ ಸಂಘದ ೧೭ನೇ ಶಾಖೆ ಈಶ್ವರಮಂಗಲದ ಗಣೇಶ್ ಕಾಂಪ್ಲೆಕ್ಸ್‌ನ ಪ್ರಥಮ ಮಹಡಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟನೆ ಮಾಡಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಶಾಸಕ ಸಂಜೀವ ಮಠಂದೂರು, ಕಂಪ್ಯೂಟರ್ ಉದ್ಘಾಟನೆಯನ್ನು ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡತ್ತಾಯ ಹಾಗೂ ಪ್ರಥಮ ಠೇವಣಿ ಪತ್ರವನ್ನು ದಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು ಬಿಡುಗಡೆ ಮಾಡಲಿದ್ದಾರೆ. ದಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ.ಜಯರಾಮ್ ರೈ ಬಳಜ್ಜ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಪೌಝಿಯಾ ಇಬ್ರಾಹಿಂ ಕೆ, ಗಣೇಶ್ ಕಾಂಪ್ಲೆಕ್ಸ್ ಮಾಲಕ ಗಣೇಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ ಸವಣೂರು, ನಿರ್ದೇಶಕ ಅಶ್ವಿನ್ ಎಲ್ ಶೆಟ್ಟಿ, ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು, ಮಹಾಪ್ರಬಂಧಕ ವಸಂತ ಜಾಲಾಡಿ, ಸಹಾಯಕ ಮಹಾ ಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಕೊಡಗು-ಉಡುಪಿಗೆ ವಿಸ್ತರಣೆ
೨೦೦೨ ಮಾರ್ಚ್ ೧೧ ರಂದು ಪುತ್ತೂರಿನಲ್ಲಿ ಹುಟ್ಟಿದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಈ ತನಕ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗಿತ್ತು. ಸಂಘಕ್ಕೆ ಪ್ರಸ್ತುತ ೨೩ನೇ ವರ್ಷ. ಮುಂದಿನ ೨೫ನೇ ವರ್ಷದ ತನ್ನ ಬೆಳ್ಳಿ ಹಬ್ಬಕ್ಕೆ ಮೊದಲು ಮೂರು ಶಾಖೆಗಳನ್ನು ತೆರೆಯಲಾಗುವುದು. ಮೊದಲ ಬಾರಿಗೆ ಜಿಲ್ಲೆಯ ಗಡಿಯನ್ನು ಮೀರಿ ಕೊಡಗು ಹಾಗೂ ಉಡುಪಿ ಜಿಲ್ಲೆಯಲ್ಲಿ ತನ್ನ ಶಾಖೆಗಳನ್ನು ತೆರೆಯಲಿದೆ. ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ರೂ.೧.೨೯ ಕೋಟಿ ಮೌಲ್ಯದ ಜಾಗ ಖರೀದಿ ಮಾಡಲಾಗಿದ್ದು, ಇದರಲ್ಲಿ ರೂ.೫ ಕೋಟಿ ವೆಚ್ಚದಲ್ಲಿ ಸಂಘದ ಕೇಂದ್ರ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣ ಮಳಿಗೆಯ ಕಾಮಗಾರಿ ನಡೆಯುತ್ತಿದೆ- ಸಹಕಾರ ರತ್ನ ಸೀತಾರಾಮ ರೈ ಸವಣೂರು ಅಧ್ಯಕ್ಷರು.