
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ೪೧೮ ಶಾಲೆಗಳಿಗೆ ೩,೪೭೨ ಜೊತೆ ಡೆಸ್ಕ್-ಬೆಂಚ್ಗಳ ವಿತರಣೆ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ಶಾಲಾಕೊಠಡಿ, ಆಟದಮೈದಾನ, ಕುಡಿಯುವನೀರು, ಶೌಚಾಲಯ, ರಂಗಮಂದಿರ, ಬೋಧನಾಸಾಮಾಗ್ರಿಗಳ ವಿತರಣೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಇದಕ್ಕಾಗಿ ಈ ವರೆಗೆ ೪೭.೬೯ ಕೋಟಿ ರೂ. ವಿನಿಯೋಗಿಸಲಾಗಿದೆ.
ಅವರು ಗುರುವಾರ ಧರ್ಮಸ್ಥಳದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ೪೧೮ ಶಾಲೆಗಳಿಗೆ ೩,೪೭೨ ಜೊತೆ ಡೆಸ್ಕ್-ಬೆಂಚ್ಗಳ ವಿತರಣೆಗೆ ಚಾಲನೆ ನೀಡಿ ಶುಭ ಹಾರೈಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ ೧೦೭೪ ಗೌರವ ಶಿಕ್ಷಕರನ್ನು ನೇಮಿಸಲಾಗಿದೆ.
ರಾಜ್ಯದ ೧೧,೬೨೧ ಶಾಲೆಗಳಿಗೆ ೭೫,೫೧೮ ಜೊತೆ ಡೆಸ್ಕ್-ಬೆಂಚ್ಗಳನ್ನು ಈ ವರೆಗೆ ವಿತರಿಸಿದ್ದು ಇದಕ್ಕಾಗಿ ೨೮.೫೫ ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಅವರು ತಿಳಿಸಿದರು.
ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಶ್ರದ್ಧಾಅಮಿತ್, ಅಮಿತ್, ಕುಮಾರಿ ಮಾನ್ಯ ಉಪಸ್ಥಿತರಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ಕುಮಾರ್ ಸವಿವರ ಮಾಹಿತಿ ನೀಡಿದರು.




























