
ಬಳ್ಳಾರಿ, ಆ.11: ಜಿಲ್ಲೆಯ ಬಳ್ಳಾರಿಯಿಂದ 18 ಕಿ. ಮೀಟರ್ ದೂರದಲ್ಲಿರುವ ಕೋಳೂರು ಗ್ರಾಮದ ಹೊರವಲಯದ ಹೊಲದ ಅಗ್ನೇಯ,ಈಶಾನ್ಯ,ನೈಋತ್ತ್ಯ, ವಾಯುವ್ಯ ದಿಕ್ಕಿಗೆ ಒಂದೊಂದು ಸುಂದರವಾದ ನಾಲ್ಕು ಸಲ್ಲೇಖನ ವ್ರತದ ಜಿನಮೂರ್ತಿ ಶಿಲ್ಪಗಳನ್ನು ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ ಹೆಚ್. ತಿಪ್ಪೇಸ್ವಾಮಿ, ಡಾ.ಗೋವಿಂದ, ಡಾ.ಕೃಷ್ಣೆಗೌಡ,ಸಂಶೋಧಕರಾದ ಇಸ್ಮಾಹಿಲ್ ಸಿದ್ದಿಕಿ, ಅಶೋಕ ನಾಯಕ ದಿದ್ದಿಗಿ, ಕೆ.ಶಿವರಾಮಪ್ಪ, ಬಂಡ್ರಿಯ ಪಾಪಯ್ಯ ಅವರುಗಳು ಸ್ಥಳೀಯರಾದ ವಕೀಲ ಕೆ. ಲಕ್ಶ್ಮಣ, ಮಲ್ಲಿಕಾರ್ಜುನ ಅವರುಗಳ ಸಹಕಾರದಿಂದ ಪತ್ತೆ ಮಾಡಲಾಗಿದೆ.
ಜೈನ ಧರ್ಮದ ಪ್ರಸರಣ ಕೇಂದ್ರ ಕೋಳೂರು :
ಗ್ರಾಮದಲ್ಲಿರುವ ಸೂರ್ಯನಾರಾಯಣ ದೇಗುಲ ಹಾಗೂ ಊರಲ್ಲಿಯ ಇತರೆ ಸ್ಥಳಗಳಲ್ಲಿ ನಾಲ್ಕು ಶಾಸನಗಳು ದೊರಕಿರುವುದರಿಂದ ಈ ಗ್ರಾಮವು ಐತಿಹಾಸಿಕವಾಗಿಯೂ ಪ್ರಸಿದ್ದಿಯನ್ನು ಹೊಂದಿದೆ ಎಂದು ತಿಳಿದುಬರುತ್ತದೆ. ಸೂರ್ಯನಾರಾಯಣ ಗುಡಿಯಲ್ಲಿ ಬೃಹತ್ ಶಿಲಾಶಾಸನವಿದೆ.ದೇಗುಲದ ನವರಂಗ ಮಂಟಪದಲ್ಲಿ ದಕ್ಷಿಣ ದಿಕ್ಕಿಗೆ ನಿಲ್ಲಿಸಿರುವ ಶಾಸನವು103 ಸಾಲಿನಲ್ಲಿದೆ. ಶಿಲಾ ಶಾಸನದ ಎರಡು ಬದಿಗೆ ಸಂಸ್ಕೃತ ಭಾಷೆಯ ಕನ್ನಡ ಲಿಪಿಯಲ್ಲಿ ಬರೆಸಲಾಗಿದೆ. ಈ ಶಾಸನವು ಚಾಲುಕ್ಯ ಜಗದೇಕಮಲ್ಲನ ಕಾಲಾವಧಿಯ ಪಾಳೆಯಗಾರನಾಗಿದ್ದ ಇಮ್ಮಡಿ ಭೀಮರಸನಿಗೆ ಸಂಬಂಧಿಸಿದುದಾಗಿದೆ. ಇದು ಬಳ್ಳಾರಿ ಜಿಲ್ಲಾ ಶಾಸನ ಸಂಪುಟದಲ್ಲಿ ಪ್ರಕಟವಾಗಿದೆ. ಈ ಶಾಸನದಲ್ಲಿ ನಂದ ಮತ್ತು ಮೌರ್ಯರ ಉಲ್ಲೇಖವಾಗಿರುವುದನ್ನು ಗಮನಿಸಿದ ನಮ್ಮ ತಂಡವು ನಂದ ಮತ್ತು ಮೌರ್ಯರ ಕಾಲದ ಕುರುಹುಗಳು ಊರಲ್ಲಿ ಸಿಗಬಹುದೆಂದು ಕ್ಷೇತ್ರಕಾರ್ಯಕ್ಕೆ ಹೋದಾಗ ಜೈನಧರ್ಮ ಸಂಸ್ಕೃತಿಯ ಪ್ರತೀಕವಾದ ನಾಲ್ಕು ಜಿನ ಮೂರ್ತಿ ಶಿಲ್ಪಗಳು ಪತ್ತೆಯಾದವು.ಇವು ಆಗಿನ ಧರ್ಮ ಮತ್ತು ಸಂಸ್ಕೃತಿಯ ಮಾಹಿತಿ ನೀಡುವ ತುಂಬಾ ಮಹತ್ವದ ಜಿನಮೂರ್ತಿ ಶಿಲ್ಪಗಳೆಂದು ತಿಳಿದು ಬಂದವು. ಈ ಶಿಲ್ಪದಿಂದ ಜಿನ ಮುನಿಯೊಬ್ಬ ಸಲ್ಲೇಖನ ವ್ರತವನ್ನು ಕೈಗೊಂಡಿರುವ ಕುರಿತಾಗಿ ತಿಳಿಸುತ್ತದೆ. ಆದರೆ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿದ ಜಿನಮೂರ್ತಿ ಶಿಲ್ಪಗಳನ್ನು ಆ ಊರಿನ ಜನರು ಮಾತ್ರ ಒಂದೊಂದಕ್ಕೂ ಒಂದೊಂದು ಹೆಸರು ಇಟ್ಟು ಗದ್ದೆಯ ಒಡೆಯರು ಇಂದಿಗೂ ಪೂಜೆ ಸಲ್ಲಿಸುತ್ತಿದ್ದಾರೆ.ಮೊದಲು ಪತ್ತೆಯಾದ ಶಿಲ್ಪಕ್ಕೆ ವೀರಭದ್ರ, ನಂತರ ಪತ್ತೆಯಾದ ಜಿನಮೂರ್ತಿ ಶಿಲ್ಪಗಳಿಗೆ ಖಾಜಾಪೀರ, ದೊಡ್ಡ ಸಂಕ್ರಮ್ಮ, ಸಣ್ಣ ಸಂಕ್ರಮ್ಮ ಎಂದು ಕರೆಯಲಾಗುತ್ತಿದೆ. ಬೇರೆ ಬೇರೆ ಹೆಸರಲ್ಲಿ ಕರೆಯುವ ಇವುಗಳನ್ನು ಗಮನಿಸಿದಾಗ ಅತ್ಯಂತ ಸುಂದರವಾದ ಜಿನ ಶಿಲ್ಪಗಳೆಂದು ಗುರುತಿಸಲಾಯಿತು. ಇದರಿಂದ ಈ ಭಾಗದಲ್ಲಿ ಮೌರ್ಯರ ಕಾಲಾವಧಿಯಲ್ಲಿ ಜೈನ ಧರ್ಮಕ್ಕೆ ಪ್ರೋತ್ಸಾಹ ನೀಡಿದ ಬಗ್ಗೆ ಇದುವರೆಗೂ ನಿಗೂಢವಾಗಿದ್ದ ಧರ್ಮ, ಇತಿಹಾಸವನ್ನು ನಮ್ಮ ತಂಡವು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದೆ. ಮುಂಬರುವ ದಿನದಲ್ಲಿ ಸಂಬಂಧಪಟ್ಟ ಇಲಾಖೆಯು ಈ ಕುರಿತು ವಿಶೇಷ ಅಧ್ಯಯನ ಮಾಡಿ, ಉತ್ಖನನ ಕೈಗೊಂಡರೆ ಜೈನ ಧರ್ಮದ ಕುರಿತಾದ ಮಹತ್ವದ ದಾಖಲೆ ಸಿಗಬಹುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಹೆಚ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಸಲ್ಲೇಖನ ವ್ರತದ ನಾಲ್ಕು ಜಿನ ಮೂರ್ತಿ ಶಿಲ್ಪಗಳು ಪತ್ತೆ :
ಕೋಳೂರಿನ ಹೊರವಲಯದ ಹೊಲದಲ್ಲಿ ಪತ್ತೆಯಾದ ನಾಲ್ಕು ಜಿನಮೂರ್ತಿ ಶಿಲ್ಪಗಳು ಸಲ್ಲೇಖನ ವ್ರತ ಬಿಂಬಿಸುತ್ತಿವೆ. ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಒಂದು ಶಿಲ್ಪಕ್ಕೆ ಸುತ್ತಲೂ ಕಟ್ಟೆ ಕಟ್ಟಿ ಅದನ್ನು ವೀರಭದ್ರ ಎಂಬ ಹೆಸರಲ್ಲಿ ಇಂದಿಗೂ ಪೂಜಿಸತೊಡಗಿದ್ದಾರೆ. ಮತ್ತೊಂದು ಜಿನಮೂರ್ತಿ ಶಿಲ್ಪದ ಅರ್ಧ ಭಾಗ ತುಂಡಾಗಿದೆ. ಈ ಶಿಲ್ಪವು ಮಾತ್ರ 7 ಅಡಿ ಎತ್ತರ 3 ಅಡಿ ಅಗಲವಾಗಿದ್ದರೆ, ಉಳಿದ ಮೂರು ಜಿನಮೂರ್ತಿ ಶಿಲ್ಪಗಳು 5 ಅಡಿ ಎತ್ತರ 3 ಅಡಿ ಅಗಲವಾಗಿವೆ. ಸುಂದರವಾದ ನಾಲ್ಕು ಜಿನ ಶಿಲ್ಪಗಳು ಮುಕ್ಕೊಡೆಯ ಕೆಳಗೆ ಪದ್ಮಾಸನದಲ್ಲಿ ಕುಳಿತ ಜಿನ ಮೂರ್ತಿಯ ಶಿಲ್ಪವನ್ನು ಕೆತ್ತಲಾಗಿದೆ. ಈ ಜಿನಮೂರ್ತಿ ಶಿಲ್ಪಗಳ ಮೇಲೆ ಎಡಬದಿಗೆ ಚಂದ್ರ, ಬಲಬದಿಗೆ ಸೂರ್ಯನ ಚಿತ್ರಗಳಿದ್ದರೆ, ಜಿನಮೂರ್ತಿಯ ತಳಭಾಗದದಲ್ಲಿ ಹಸು ಮತ್ತು ಖಡ್ಗದ ಚಿತ್ರಗಳು ಕೆತ್ತಲಾಗಿದೆ. ಈ ಶಿಲ್ಪವನ್ನು ನಾಶಗೊಳಿಸಿದವರು ಹಸುಕೊಂದ ಪಾಪಕ್ಕೆ ಗುರಿಯಾಗುವರು ಎಂಬುದಾಗಿ ಈ ಚಿತ್ರವು ಸೂಚಿಸುತ್ತದೆ. ಆದರೆ ಇಲ್ಲಿರುವ ಯಾವ ಶಿಲ್ಪಗಳಿಗೂ ಲಿಪಿ ಇಲ್ಲ ಎಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಹಿರಿಯ ಶ್ರೇಣಿ ಸಹಾಯಕ ಪ್ರಾಧ್ಯಾಪಕರಾದ ಡಾ.ಗೋವಿಂದ ಅವರು ತಿಳಿಸಿದ್ದಾರೆ.
ಜಿನ ಶಿಲ್ಪಗಳ ರಕ್ಷಣೆಗೆ ತಂಡ ಮೊರೆ :
ಈ ನಾಲ್ಕು ಶಿಲ್ಪಗಳು ಈ ಹಿಂದೆ ಜೈನ ಧರ್ಮಿಯರು ವಾಸವಾಗಿದ್ದರೆನ್ನಲು ಸಾಕ್ಷಿಭೂತವಾಗಿ ನಿಂತಿವೆ.ಈ ಜಿನಮೂರ್ತಿ ಶಿಲ್ಪಗಳನ್ನು ಬಿಸಿಲು, ಗಾಳಿ ಮಳೆಯಿಂದ ರಕ್ಷಿಸಬೇಕಾಗಿದೆ.ಆದ್ದರಿಂದ ಕೋಳೂರಿನ ಪಂಚಾಯತಿ ಇಲ್ಲವೇ ಸಂಬಂಧಿಸಿದ ಇಲಾಖೆಯು ಶಿಲ್ಪಗಳನ್ನು ರಕ್ಷಿಸಿ, ನಮ್ಮ ಸಂಸ್ಕೃತಿ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಉಳಿಸಲಿ ಎಂದು ದೃಶ್ಯಕಲಾ ವಿಭಾಗದ ಡಾ. ಕೃಷ್ಣೆಗೌಡ ಅವರು ಒತ್ತಾಹಿಸಿದ್ದಾರೆ.





























