ಜೆ ಎಸ್ ಡಬ್ಲ್ಯೂ ಫೌಂಡೇಶನ್ ವತಿಯಿಂದ ವಿದ್ಯುತ್ ತಂತ್ರಜ್ಞ ತರಬೇತಿ ಪ್ರಾರಂಭ

ಸಂಜೆವಾಣಿ ವಾರ್ತ

ಸಂಡೂರು, ಡಿ.25:  ತಾಲೂಕಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜೆ ಎಸ್ ಡಬ್ಲ್ಯೂ ಫೌಂಡೇಶನ್ ವತಿಯಿಂದ ಹೊಸ ವಿದ್ಯುತ್ ತರಬೇತಿ ಕೇಂದ್ರವನ್ನು ಬುಧವಾರ ಉದ್ಘಾಟಿಸಲಾಯಿತು. ಇದು ಜೆಎಸ್ಡಬ್ಲ್ಯೂನ  ಕೌಶಲ್ಯ ಅಭಿವೃದ್ಧಿಯ ಉಪಕ್ರಮದ ಭಾಗವಾಗಿದ್ದು, ಯುವಕರಿಗೆ ಉದ್ಯೋಗ ಪಡೆಯಲು ಅಗತ್ಯವಾದ ತಾಂತ್ರಿಕ ಕೌಶಲ್ಯಗಳನ್ನು ಕಲಿಸುವ ಉದ್ದೇಶ ಹೊಂದಿದೆ. ಈ ತರಬೇತಿ ಕಾರ್ಯಕ್ರಮದಲ್ಲಿ 120 ಯುವಕರಿಗೆ ವಿದ್ಯುತ್ ವೈರಿಂಗ್, ಸುರಕ್ಷತಾ ಕ್ರಮಗಳು, ಉಪಕರಣಗಳ ಬಳಕೆ ಮತ್ತು ಪ್ರಾಯೋಗಿಕ ಕ್ಷೇತ್ರ ಅನುಭವದ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಮುಗಿದ ನಂತರ ಉದ್ಯೋಗ ಸಿದ್ಧತೆಯನ್ನು ಹೆಚ್ಚಿಸಲು ಉದ್ಯೋಗ ಬೆಂಬಲವೂ ನೀಡಲಾಗುತ್ತದೆ.

ಕಾರ್ಯಕ್ರಮವನ್ನು ಬಳ್ಳಾರಿ ಲೋಕಸಭಾ ಸಂಸದರಾದ ಈ. ತುಕಾರಾಮ್ ಅವರು ಉದ್ಘಾಟಿಸಿ ಮಾತನಾಡಿ “ಸಂಡೂರಿನಲ್ಲಿ ಐ ಟಿ ಐ ಕಾಲೇಜು ಮೊದಲು ಒಂದು ಚಿಕ್ಕ ಜಾಗದಲ್ಲಿ ಇತ್ತು, ನಾನು ಗೆದ್ದು ಬಂದ ಮೇಲೆ ಈಗಿನ ಹೊಸ ಐ ಟಿ ಐ ಕಾಲೇಜು ಮತ್ತು ಹೊಸ ಪದವಿ ಕಾಲೇಜು ಕೊಠಡಿಗಳನ್ನು ಕಟ್ಟಿಸಲಾಗಿದೆ, ಇವೆಲ್ಲವನ್ನೂ ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮತ್ತು ಅವರಿಗೆ ಉತ್ತಮ ಕೆಲಸ ಸಿಗಲೆಂದು ಮಾಡಿದ ಕಾರ್ಯಕ್ರಮಗಳಾಗಿವೆ, ನಾವು ಓದುವಾಗ ಹೆಚ್ಚಿನ ಸವಲತ್ತುಗಳು ಇರಲಿಲ್ಲ, ಈಗ ಉತ್ತಮ ಕೊಠಡಿ ಮತ್ತು ತರಬೇತಿ ಕೇಂದ್ರಗಳನ್ನು ನಿಮಗಾಗಿ ಮಾಡಿದ್ದೇವೆ, ಈಗಿನ ಕಾರ್ಯಕ್ರಮಗಳನ್ನು ನಮ್ಮ ಮನವಿಯ ಮೇರೆಗೆ ಜೆ ಎಸ್ ಡಬ್ಲ್ಯೂ ಫೌಂಡೇಶನ್ ಅಧ್ಯಕ್ಷೆಯಾದ  ಶ್ರೀಮತಿ ಸಂಗೀತ ಜಿಂದಾಲ್ ಅವರ ನೇತೃತ್ವದಲ್ಲಿ ನಡೆಸುತ್ತಿದ್ದಾರೆ, ಅವರಿಗೂ ಕೂಡ ಧನ್ಯವಾದಗಳು ಮತ್ತು ಇದರ ಉಪಯೋಗವನ್ನು ಗ್ರಾಮೀಣ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು” ಎಂದು ತಿಳಿಸಿದರು

ಜೆ ಎಸ್ ಡಬ್ಲ್ಯೂ ಫೌಂಡೇಶನ್ ಸೌತ್ ಝೋನಲ್ ಹೆಡ್- ಪೆದ್ದಣ್ಣ ಬೀಡಲಾ ಮಾತನಾಡಿ “ಕೈಗಾರಿಕೆಯವರು ನಮಗೆ ಕೌಶಲ್ಯವಿರುವ ವ್ಯಕ್ತಿಗಳು ಸಿಗುತ್ತಿಲ್ಲ ಎನ್ನುತ್ತಾರೆ, ಈ ಕಡೆ  ಯುವಜನತೆ ನಮಗೆ ಕೆಲಸ ಸಿಗುತ್ತಿಲ್ಲ ಎನ್ನುತ್ತಾರೆ, ಹಾಗಾದರೆ; ಇಲ್ಲಿ ಬೇಕಾಗಿರುವುದು ಹೊಸ ತಲೆಮಾರಿನ ಕೌಶಲ್ಯಗಳು ಮತ್ತು ಕೌಶಲ್ಯಯುತ ಯುವಕರು, ಇದನ್ನೇ ನಮ್ಮೆ ಈ ಕಾರ್ಯಕ್ರಮ ಮಾಡುತ್ತಿರುದು ಎಂದು ಯುವಕರನ್ನು ಕೌಶಲ್ಯರಾಗುವಂತೆ ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಜೆ ಎಸ್ ಡಬ್ಲ್ಯೂ ಮೈನಿಂಗ್ ವಿಭಾಗದ ಉಪಾಧ್ಯಕ್ಷರಾದ ಮಣಿಭೂಷಣ್ ಸಿಂಗ್ ಮತ್ತು ಜೆ ಎಸ್ ಡಬ್ಲ್ಯೂ ಎನರ್ಜಿ ಸಿ ಎಸ್ ಆರ್ ಅಧಿಕಾರಿಯಾದ ಶ್ರೀಕಾಂತ್ ಹೆಗಡೆ, ನಾಗನಗೌಡ, ಶ್ರೇಷ್ಠ ಮತ್ತು ಐ ಟಿ ಐ ಕಾಲೇಜಿನ ಪ್ರಾಂಶುಪಾಲರಾದ ಸುರೇಶ ಬಾಬು ಮತ್ತು ಸಿಬ್ಬಂದಿಗಳು ಹಾಗೂ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿರುವ ಗ್ರಾಮ ವಿಕಾಸ ಸೊಸೈಟಿಯ ನಿರ್ದೇಶಕರಾದ ಸಚಿನ್ ಮತ್ತು 150 ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು