ಜೆಸಿಐ ೭ ದಿನಗಳ ಜೆಸಿ ಸಪ್ತಾಹಕ್ಕೆ ಚಾಲನೆ

ಪುತ್ತೂರು: ಅಂತಾರಾಷ್ಟ್ರೀಯ ಸಂಸ್ಥೆಯಾದ ಜೆಸಿಐ ಪ್ರತೀ ವರ್ಷ ೭ ದಿನಗಳ ಕಾಲ ಜೆಸಿ ಸಪ್ತಾಹ ಆಚರಿಸುತ್ತಿದ್ದು, ದೇಶದ ೧೫೦೦ ಘಟಕಗಳು ಏಕಕಾಲದಲ್ಲಿ ನಡೆಸುತ್ತವೆ. ಪುತ್ತೂರು ಜೆಸಿಐ ಘಟಕದ ವತಿಯಿಂದ ನಗರದ ವಿದ್ಯಾಮಾತಾ ಅಕಾಡೆಮಿ ಕಚೇರಿಯಲ್ಲಿ ಮಂಗಳವಾರ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ಒಂದು ವಾರದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಪುತ್ತೂರು ಜೆಸಿ ಘಟಕದ ಅಧ್ಯಕ್ಷ ಭಾಗ್ಯೇಶ್ ರೈ ಅವರು ಉದ್ಘಾಟನಾ ಸಮಾರಂಭದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸೆ.೧೦ರಂದು ಬೆಳಗ್ಗೆ ವೆಬ್ ಪೀಪಲ್ ಸಂಸ್ಥೆಯಲ್ಲಿ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಅಪರಾಹ್ನ ಜಿಡೆಕಲ್ಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಲಿದೆ. ಸೆ.೧೧ರಂದು ಬೆಳಗ್ಗೆ ವಿದ್ಯಾಮಾತಾ ಆಕಾಡೆಮಿ ಕಚೇರಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಅಪರಾಹ್ನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟ ನಡೆಯಲಿದೆ ಎಂದರು.
ಸೆ.೧೨ರಂದು ಬೆಳಗ್ಗೆ ದರ್ಬೆ ಸಚ್ಚಿದಾನಂದ ಸಭಾಭವನದಲ್ಲಿ ವ್ಯವಹಾರ ನೆಟ್‌ವರ್ಕಿಂಗ್ ಸಭೆ ನಡೆಯಲಿದೆ. ಬಳಿಕ ಜಿಎಲ್‌ವನ್ ಮಾಲ್‌ನಲ್ಲಿ ನಾಮಫಲಕದೊಂದಿಗೆ ವ್ಯವಹಾರ ದಿನಕ್ಕೆ ಚಾಲನೆ ನೀಡಲಾಗುತ್ತದೆ. ಸೆ.೧೩ರಂದು ಸುದಾನ ಪ.ಪೂ. ಕಾಲೇಜಿನಲ್ಲಿ “ಕರ್ತವ್ಯಕ್ಕಾಗಿ ಧ್ವನಿ- ಮಾನವ ಕರ್ತವ್ಯ ಮತ್ತು ಮನವಿ ದಿನ’ ನಡೆಯಲಿದೆ. ಸೆ.೧೪ರಂದು ಪುತ್ತೂರು ನಗರದಲ್ಲಿ ಆಮಂತ್ರಣ ದಿನ- ಬನ್ನಿ ಜೆಸಿಐ ಸೇರಿ’ ನಡಿಗೆ ಜಾಥಾ ನಡೆಯಲಿದೆ. ಇದಾದ ಬಳಿಕ ವಿದ್ಯಾಮಾತಾ ಅಕಾಡೆಮಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ತುಳುನಾಡಿನ ಭೋಜನ “ಪುದ್ವಾರ್ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಸಿಐ ಪುತ್ತೂರು ನಿಕಟಪೂರ್ವ ಅಧ್ಯಕ್ಷ ಮೋಹನ್ ಕೆ., ಕಾರ್ಯದರ್ಶಿ ಮನೋಹರ ಪಾಟಾಳಿ, ಲೇಡಿ ಕೋಆರ್ಡಿನೇಟರ್ ಆಶಾ ಮೋಹನ್, ಯೋಜನಾ ನಿರ್ದೇಶಕ ರುಕ್ಮಯ ಉಪಸ್ಥಿತರಿದ್ದರು.