
ಪುತ್ತೂರು: ಹಲಸಿನ ಮೌಲ್ಯವರ್ಧನೆ ಮತ್ತು ಹೊಸತನ ಅಳವಡಿಕೆಯ ಹಿನ್ನಲೆಯಲ್ಲಿ ನವತೇಜ ಪುತ್ತೂರು ಆಯೋಜನೆಯಲ್ಲಿ ಜೂ.೬ರಿಂದ ೮ರ ತನಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸು ಹಣ್ಣು ಮೇಳ’ ಹಮ್ಮಿಕೊಳ್ಳಲಾಗಿದೆ ಎಂದು ನವತೇಜ ಪುತ್ತೂರು ಅಧ್ಯಕ್ಷ ಅನಂತಪ್ರಸಾದ್ ನೈತಡ್ಕ ತಿಳಿಸಿದ್ದಾರೆ.
ಅವರು ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಜೂ. ೬ರಂದು ಬೆಳಿಗ್ಗೆ ಮೇಳದ ಮಳಿಗೆಗಳನ್ನು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ ಮತ್ತು ಕೃಷಿಕ ಮಹದೇವ ಶಾಸ್ತ್ರಿ ಮಣಿಲಾ ಉಪಸ್ಥಿತರಿರುತ್ತಾರೆ. ಅಪರಾಹ್ನ ನಡೆಯುವ ಸಭೆಯ ನೇತೃತ್ವವನ್ನು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ವಹಿಸಲಿದ್ದಾರೆ. ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಬೊಟ್ಯಾಡಿ ಶುಭಚಾಲನೆ ನೀಡಲಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಮುಳಿಯ ಜ್ಯುವೆಲ್ಸ್ ಎಂಡಿ ಕೇಶವ ಪ್ರಸಾದ್ ಮುಳಿಯ, ನಗರಸಭೆಯ ಆಯುಕ್ತ ಮಧು ಎಸ್ ಮನೋಹರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಕಸಾಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆಯಲ್ಲಿ ಹಲಸು-ಹಣ್ಣುಗಳ ಕವಿಗೋಷ್ಠಿ ನಡೆಯಲಿದೆ.
ಜೂ. ೭ರಂದು ಪೂರ್ವಾಹ್ನ ಗ್ರಾಮಜನ್ಯ ರೈತೋತ್ಪಾದಕ ಸಂಸ್ಥೆಯ ನಿರ್ದೇಶಕ ನಿರಂಜನ್ ಪೋಳ್ಯ ಅವರ ಅಧ್ಯಕ್ಷತೆಯಲ್ಲಿ ‘ಹಣ್ಣುಗಳೊಂದಿಗೆ’ ವಿಚಾರಗೋಷ್ಠಿ ನಡೆಯಲಿದ್ದು, ಹಾರ್ಧಿಕ್ ಹರ್ಬಲ್ಸ್‌ನ ಕಾರ್ಯನಿರ್ವಹಣಾಧಿಕಾರಿ ಮುರಳೀಧರ ಕೆ, ಶ್ರೀರಾಮ ಆಯಿಲ್ ಮಿಲ್‌ನ ಸಂತೋಷ್ ಬೋನಂತಾಯ, ಸೇಡಿಯಾಪು ವಿಶ್ವಾಸ್ ಹೋಂ ಪ್ರಾಡೆಕ್ಟ್‌ನ ವಿನಯ ಸೇಡಿಯಾಪು, ಕೃಷಿಕ ಶಿವಪ್ರಸಾದ್ ಪಟ್ಟೆ, ಹಣ್ಣು ಕೃಷಿಕ ಚೇತನ್ ಶೆಟ್ಟಿ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ ಪ್ರಸಿದ್ದ ಕಲಾವಿದರಿಂದ ‘ಪನಸೋಪಾಖ್ಯಾನ’ ವಿನೂತನ ತಾಳಮದ್ದಳೆ ನಡೆಯಲಿದೆ.
ಜೂ. ೮ರಂದು ಪೂರ್ವಾಹ್ನ ಸಮೃದ್ಧಿ ಗಿಡ ಗೆಳೆತನ ಸಂಘದ ಅಧ್ಯಕ್ಷ ಶಂಕರ ಸಾರಡ್ಕ ಅಧ್ಯಕ್ಷತೆಯಲ್ಲಿ ‘ಮೌಲ್ಯವರ್ಧನೆ” ವಿಚಾರಗೋಷ್ಠಿ ನಡೆಯಲಿದ್ದು, ಬಾಯಾರು ಕುರುವೇರಿ ಕ್ಯಾಶ್ಯೂಸ್‌ನ ವಿಶ್ವಕೇಶವ ಮತ್ತು ನವ್ಯಶ್ರೀ ಕುರುವೇರಿ, ಅನುತ್ತಮ ಚಾಕೊಲೇಟ್‌ನ ಬಾಲಸುಬ್ರಹ್ಮಣ್ಯ ಪಿ.ಎಸ್, ಜೇನು ಕೃಷಿಕ ಶ್ಯಾಮ ಭಟ್ ವಾದ್ಯಕೋಡಿ, ಮುಜಂಟಿ ಜೇಜು ಕೃಷಿಕ ರಾಮಚಂದ್ರ ಪುದ್ಯೋಡು ವಿಚಾರ ಮಂಡನೆ ಮಾಡಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದ ನೇತೃತ್ವವನ್ನು ಕ್ಯಾ. ಬ್ರಿಜೇಶ್ ಚೌಟ ವಹಿಸಲಿದ್ದಾರೆ. ಉಪ್ಪಿನಂಗಡಿ ಬಳ್ಳಿ ಆಯುರ್ ಗ್ರಾಮದ ಮುಖ್ಯ ವೈದ್ಯ ಡಾ. ಸುಪ್ರೀತ್ ಲೋಬೋ ಸಮಾಪನಾ ಮಾತುಗಳನ್ನಾಡಲಿದ್ದಾರೆ. ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ನವತೇಜದ ಕಾರ್ಯದರ್ಶಿ ಸುಹಾಸ್ ಮರಿಕೆ, ವೇಣುಗೋಪಾಲ್, ಕುಸುಮರಾಜ್ ಮತ್ತು ಪಶುಪತಿ ಶರ್ಮ ಉಪಸ್ಥಿತರಿದ್ದರು.