Home ಜಿಲ್ಲೆ ಮಂಗಳೂರು ಜುಲೈರೊಳಗೆ ಕಡಂದಲೆ ೪೦೦ ಕೆ.ವಿ ಉಪಕೇಂದ್ರ ಕಾಮಗಾರಿ ಪೂರ್ಣ ಗುರಿ

ಜುಲೈರೊಳಗೆ ಕಡಂದಲೆ ೪೦೦ ಕೆ.ವಿ ಉಪಕೇಂದ್ರ ಕಾಮಗಾರಿ ಪೂರ್ಣ ಗುರಿ

ಮಂಗಳೂರು- ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಿಗೆ ತಡೆರಹಿತ, ಉತ್ತಮ ಗುಣಮಟ್ಟದ ವಿದ್ಯುತ್ ಸೌಲಭ್ಯ ಒದಗಿಸುವ ’ಕಡಂದಲೆ ೪೦೦ ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿಯನ್ನು ಜುಲೈ ೧೫ ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಭೂವ್ಯಾಜ್ಯದ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಕಡಂದಲೆ ಗ್ರಾಮದಲ್ಲಿ ೪೦೦ ಕೆವಿ ಲೈನ್ ಕಾಮಗಾರಿ ಸ್ಥಗಿತಗೊಂಡಿತ್ತು. ಇಂಧನ ಸಚಿವ ಕೆ.ಜೆ. ಜಾರ್ಜ್ ಹಾಗೂ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರ ಸತತ ಪ್ರಯತ್ನದಿಂದಾಗಿ ಈ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ನಿವಾರಿಸಲಾಗಿದೆ. ಸಚಿವರ ನಿರ್ದೇಶನದ ಮೇರೆಗೆ ಬುಧವಾರ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಮಂಗಳೂರು ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು, ತಡೆರಹಿತ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ಸಚಿವರ ನಿರ್ದೇಶನದಂತೆ ಮುಂಬರುವ ಮುಂಗಾರಿನೊಳಗೆ ಈ ಯೋಜನೆಯನ್ನು ಮುಕ್ತಾಯಗೊಳಿಸಿ ವಿದ್ಯುತ್ ಪ್ರಸರಣ ಕಾರ್ಯ ಆರಂಭಿಸಲಾಗುವುದು” ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಗೆ ಸಂಜೀವಿನಿ
“ಪ್ರಮುಖ ಕೈಗಾರಿಕಾ ಹಬ್ಗಳಾಗಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಒದಗಿಸುವ ಪ್ರಮುಖ ಯೋಜನೆ ಇದಾಗಿದೆ. ಮಳೆಗಾಲದಲ್ಲಿ ಎದುರಾಗುತ್ತಿದ್ದ ವೋಲ್ಟೇಜ್ ವ್ಯತ್ಯಯ ಮತ್ತು ಕಡಿಮೆ ವೋಲ್ಟೇಜ್ ಸಮಸ್ಯೆಗೆ ಈ ೪೦೦ ಕೆವಿ ಉಪಕೇಂದ್ರ ಶಾಶ್ವತ ಮುಕ್ತಿ ನೀಡಲಿದೆ. ಅಲ್ಲದೆ, ಯಾವುದೇ ಒಂದು ಸ್ಟೇಷನ್ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷ ಉಂಟಾದಾಗ, ಈ ಉಪಕೇಂದ್ರದ ಮೂಲಕ ಪರ್ಯಾಯವಾಗಿ ಲೋಡ್ ತೆಗೆದುಕೊಂಡು ತಕ್ಷಣವೇ ವಿದ್ಯುತ್ ಮರುಸಂಪರ್ಕ ಕಲ್ಪಿಸುವುದು ಸುಲಭವಾಗಲಿದೆ. ಇದರಿಂದ ಕರಾವಳಿಯ ಪ್ರಮುಖ ಜಿಲ್ಲೆಗಳಿಗೆ ಗುಣಮಟ್ಟದ ವಿದ್ಯುತ್ ಲಭ್ಯವಾಗಲಿದೆ” ಎಂದು ಹೇಳಿದರು.
ಲೈನ್ ಕ್ಲೀಯರ್ ಮತ್ತು ಸಾರ್ವಜನಿಕರ ಸಹಕಾರಕ್ಕೆ ಮನವಿ
“ಈ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ, ಹಾಲಿ ಇರುವ ೪೦೦ ಕೆವಿ ಯುಪಿಸಿಎಲ್-ಹೆಬ್ಬನಹಳ್ಳಿ ಪ್ರಸರಣ ಮಾರ್ಗದ ಮೇಲೆ ಮೇ ೬ ರಿಂದ ಮೇ ೨೪ ರವರೆಗೆ ಮಾರ್ಗ ಮುಕ್ತತೆಯನ್ನು ಪಡೆಯಲು ನಿಗಮವು ನಿರ್ಧರಿಸಿದೆ. ಈ ಮಾರ್ಗ ಮುಕ್ತತೆಯ ಅವಧಿಯಲ್ಲಿ, ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪ್ರಸರಣ ಮಾರ್ಗದ ಮೇಲಿನ ಒತ್ತಡ ನಿಭಾಯಿಸಿ ಪರ್ಯಾಯ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ, ತಾಂತ್ರಿಕವಾಗಿ ಅನಿವಾರ್ಯವಾದರೆ ಮಾತ್ರ ಸೀಮಿತ ಅವಧಿಗೆ ವಿದ್ಯುತ್ ಕಡಿತ ಮಾಡಬೇಕಾದ ಸನ್ನಿವೇಶ ಉಂಟಾಗಬಹುದು. ಮಂಗಳೂರಿನ ದೀರ್ಘಕಾಲೀನ ವಿದ್ಯುತ್ ಭದ್ರತೆಯ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಗ್ರಾಹಕರು ಎಂದಿನಂತೆ ಸಹಕಾರ ನೀಡಬೇಕು” ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.
ಅಡೆತಡೆ ನಿವಾರಣೆ: ಸಚಿವ ಜಾರ್ಜ್
“ಕರಾವಳಿ ಭಾಗದ ಕೈಗಾರಿಕಾ ಬೆಳವಣಿಗೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಿರಂತರ ವಿದ್ಯುತ್ ಪೂರೈಕೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕೆಲವು ಕಾನೂನು ತೊಡಕುಗಳಿಂದ ೪೦೦ ಕೆ.ವಿ ಲೈನ್ ಎಳೆಯುವ ಕಾರ್ಯದಲ್ಲಿ ವಿಳಂಬವಾಗಿತ್ತು. ಈ ಯೋಜನೆಯ ಅಡೆತಡೆಗಳನ್ನು ನಿವಾರಿಸಲು ಇಲಾಖೆ ವಿಶೇಷ ಮುತುವರ್ಜಿ ವಹಿಸಿದೆ. ಕಡಂದಲೆ ಉಪಕೇಂದ್ರವು ಮಂಗಳೂರು ಮತ್ತು ಉಡುಪಿ ಭಾಗಕ್ಕೆ ಅತ್ಯುತ್ತಮ ಗುಣಮಟ್ಟದ ವಿದ್ಯುತ್ ಸೌಲಭ್ಯವನ್ನು ಖಚಿತಪಡಿಸಲಿದೆ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಯೋಜನೆಗೆ ಎದುರಾಗಿದ್ದ ಭೂವ್ಯಾಜ್ಯಗಳನ್ನು ಪರಿಹರಿಸಲು ಇಲಾಖಾ ಮಟ್ಟದಲ್ಲಿ ನಿರಂತರ ಪರಿಶೀಲನೆ ನಡೆಸಿ, ಶೀಘ್ರ ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲು ಕೆಪಿಟಿಸಿಎಲ್ಗೆ ಸೂಚನೆ ನೀಡಲಾಗಿದೆ ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದಶಿ ಗೌರವ್ ಗುಪ್ತ ಹೇಳಿದರು.
ಕೌಶಲ್ಯಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಡಿ.ಸಿ ಸೂಚನೆ
ಮಂಗಳೂರು- ಜಿಲ್ಲಾ, ಕೌಶಲ್ಯ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿ ದರ್ಶನ ಹೆಚ್.ವಿ ಇವರ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯ ಮಿಷನ್ ಸಭೆಯಲ್ಲಿ ಮಂಡಿಸಲಾಯಿತು.
ಯೋಜನಾ ವರದಿಯ ನೋಡೆಲ್ ಅಧಿಕಾರಿ ಕೆ.ಪಿ.ಟಿ ಆಯ್ಕೆ ಶ್ರೇಣಿ ಉಪನ್ಯಾಸಕ ಹರೀಶ್ ಸಿ.ಪಿ ಅವರು ಯೋಜನಾ ವರದಿಯನ್ನು ಸಭೆಗೆ ಮಂಡಿಸಿದರು.
ವರದಿಯನ್ನು ಜಿಲ್ಲೆಯ ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ವಿವಿಧ ಸರ್ಕಾರಿ ಇಲಾಖೆಗಳು, ಮತ್ತು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ದತ್ತಾಂಶವನ್ನು ಕ್ರೋಢೀಕರಿಸಿ ಸಿದ್ಧಪಡಿಸಲಾಗಿದ್ದು ಜಿಲ್ಲೆಯ ಕೈಗಾರಿಕೆಗಳಿಗೆ ಭವಿಷ್ಯದಲ್ಲಿ ಬೇಕಿರುವ ಕೌಶಲ್ಯಗಳ ಬೇಡಿಕೆ ಮತ್ತು ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಂದ ಪೂರೈಕೆ ಸರಪಳಿ ಕುರಿತು ಅಧ್ಯಯನ ಕೈಗೊಂಡು ವಿದ್ಯಾರ್ಥಿಗಳಿಗೆ ಪದವಿಯ ಅಂತಿಮ ಹಂತದಲ್ಲಿ ತಾವು ಓದುತ್ತಿರುವ ಸಂಸ್ಥೆಗಳ ಪ್ಲೇಸ್ಮೆಂಟ್ ಘಟಕಗಳ ಮೂಲಕ ವಿವಿಧ ಕಂಪನಿಗಳಿಗೆ ಆಯ್ಕೆಗೊಂಡ ಶೇಕಡಾವಾರು ಅಂಕಿ-ಅಂಶಗಳು ಮತ್ತು ಸರಾಸರಿ ಸಂಬಳ ಮತ್ತು, ವಿದ್ಯಾರ್ಥಿಗಳು ಬಯಸುವ ಅನೂಕೂಲತೆಗಳು ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಹಮ್ಮಿಕೊಂಡಿರುವ ಕೌಶಲ್ಯಾಭಿವೃದ್ಧಿ ಯೋಜನೆಗಳು ಮತ್ತು ಫಲಾನುಭವಿಗಳ ಬಗೆಗೆ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಹೊರ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿರುವ ಕೌಶಲ್ಯದ ಕೊರತೆ ಮತ್ತು ಅದರ ಹಿಂದಿನ ಕಾರಣಗಳ ಬಗ್ಗೆ ಪರಾಮರ್ಶೆ ನಡೆಸಿ ಕೌಶಲ್ಯ ಹೆಚ್ಚಿಸಲು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾರಿಗೊಳಿಸಲಾದ ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಾಯೋಜಿತ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನು??ಠನಗೊಳಿಸಿ ಕ್ರಮವಹಿಸಲು ನಿರ್ದೇಶನ ನೀಡಿದರು. ಅಲ್ಲದೇ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಿಪುಣ ಯೋಜನೆಯ ಬಗ್ಗೆ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ನೈಪುಣ್ಯತೆ ಮತ್ತು ಕೌಶಲ್ಯತೆ ಹೆಚ್ಚಿಸಲು ವಿಫುಲ ಅವಕಾಶಗಳಿದ್ದು, ಈ ಬಗ್ಗೆ ಜಿಲ್ಲೆಯ ಕೈಗಾರಿಕೆಗಳು ಪಾಲುದಾರಿಕೆ ಹೊಂದಲು ಹೆಚ್ಚಿನ ಮಟ್ಟದ ಪ್ರಚಾರ ನೀಡಲು ಮತ್ತು ಕೈಗಾರಿಕಾ ಸಂಘಗಳ ಪ್ರತಿನಿಧಿಗಳನ್ನೊಳಗೊಂಡ ತಂಡ ರಚಿಸಲು ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಕೆ.ಇ. ಜಯರಾಂ, ಕೆ.ಸಿ.ಸಿ.ಐ.ಯ ಅಧ್ಯಕ್ಷ ಪಿ.ಬಿ. ಅಹ್ಮದ್ ಮುದಾಸರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.