
ಸಂಜೆವಾಣಿ ನ್ಯೂಸ್
ಮೈಸೂರು: ಜ.02:- ಜೀವನ ಕಳೆದುಕೊಳ್ಳಬೇಡಿ, ಬದುಕಿ ಸಾಧಿಸಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಜಾನಪದ ಗಾಯಕ ಅಮ್ಮ ರಾಮಚಂದ್ರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ವಿ.ವಿ.ಮೊಹಲ್ಲಾದ ಮಾತೃಮಂಡಳಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾನು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಫೇಲಾದಾಗ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ, ನನ್ನ ತಾಯಿ ತಡೆದು, ಬುದ್ಧಿವಾದ ಹೇಳಿದರು. ಅದರಂತೆ ನಾನು ಕಷ್ಟಪಟ್ಟು ಓದಿ, ಎರಡು ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದು, ಈಗ ಪಿಎಚ್.ಡಿಯೂ ಮುಗಿದಿದ್ದು, ಜ.5 ರಂದು ನಡೆಯುವ ಮೈಸೂರು ವಿವಿ ಘಟಿಕೋತ್ವದಲ್ಲಿ ಡಾಕ್ಟರೇಟ್ ಪಡೆಯುತ್ತಿದ್ದೇನೆ. ಆದ್ದರಿಂದ ನೀವು ಕಡೆ ತಂದೆ- ತಾಯಿಯ ಕಣ್ಣಲ್ಲಿ ನೀರು ಹಾಕಿಸದೇ ಆನಂದಭಾಷ್ಪ ಬರುವ ರೀತಿಯಲ್ಲಿ ಓದಬೇಕು ಎಂದರು.
ವಿದ್ಯೆ ಇವತ್ತು ಬಹುಮುಖ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ವಿದ್ಯೆಯಿಂದಲೇ ವಿಶ್ವಜ್ಞಾನಿಯಾದರು. ಆದ್ದರಿಂದ ವಿದ್ಯಾರ್ಥಿಗಳು ಟಿವಿ ನೋಡುವುದನ್ನು ಬಿಟ್ಟು, ಮೊಬೈಲ್ ಬಳಕೆ ಕಡಿಮೆ ಮಾಡಿ, ಓದುವುದರತ್ತ ಸದಾ ಚಿತ್ತ ಹರಿಸಬೇಕು, ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಸಂಸ್ಕೃತಿ ಮುಖ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಶಿಸ್ತು, ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಛಲದಿಂದ ಏನು ಬೇಕಾದರೂ ಸಾಧಿಸಬಹುದು. ಶಿಕ್ಷಕರು ಹಾಗೂ ಪೆÇೀಷಕರ ಬೆಂಬಲದಿಂದ ಗುರಿ ಸಾಧಿಸುವ ಕಡೆ ಗಮನ ನೀಡಿ ಎಂದು ಸಲಹೆ ಮಾಡಿದರು.
ಮಾತೃಮಂಡಳಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ವಾಣಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಅರಸ್, ಉಪಸ್ಥಿತರಿದ್ದರು. ಸದಸ್ಯೆ ಶಕುಂತಲಾ ವೇಣುಗೋಪಾಲ್ ವಿಶೇಷ ಆಹ್ವಾನಿತರಾಗಿದ್ದರು. ಸದಸ್ಯರಾದ ಪದ್ಮಾ, ಉಷಾ ಹೆಗಡೆ, ಪಿಯು ಕಾಲೇಜು ಪ್ರಾಂಶುಪಾಲ ಸುರೇಶ್, ಸುಮಿತ್ರಾ, ಆನಂದರಾಮ್, ಮಮತಾ, ಹರೀಶ್ ಮೊದಲಾದವರು ಇದ್ದರು. ಮುಖ್ಯ ಶಿಕ್ಷಕಿ ಅನಿತಾ ಸ್ವಾಗತಿಸಿದರು. ಸಹ ಶಿಕ್ಷಕಿ ಶೋಭಾ ಕಾರ್ಯಕ್ರಮ ನಿರೂಪಿಸಿದರು. ರಮ್ಯಾ ಹಾಗೂ ಅನುರಾಧ ಅತಿಥಿಗಳನ್ನು ಪರಿಚಯಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಯಿತು.




























