
ಸಂಜೆವಾಣಿ ನ್ಯೂಸ್
ಮೈಸೂರು: ಜ.27:-ಕ್ರಿಕೆಟ್ ಕೇವಲ ಮೈದಾನಕ್ಕೆ ಸೀಮಿತವಾದ ಆಟವಲ್ಲ; ಅದು ಜೀವನಕ್ಕೆ ಅಗತ್ಯವಾದ ವಿನಯ, ಸಹನೆ, ಶಿಸ್ತು ಮತ್ತು ತಂಡದೊಂದಿಗೆ ಕೆಲಸ ಮಾಡುವ ಅಮೂಲ್ಯ ಜೀವನ ಕೌಶಲಗಳನ್ನು ಕಲಿಸುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಉಪಾಧ್ಯಕ್ಷ ಸುಜಿತ್ ಸೋಮಸುಂದರ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‍ಎಸ್ ಎಸ್ಟಿಯು-ಕೆಎಸ್ಸಿಎ ಮೈದಾನದಲ್ಲಿ ಸೋಮವಾರ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ (ಜೆಎಸ್‍ಎಸ್ ಎಸ್ಟಿಯು) ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟ (ಎಐಯು)ದ ಸಹಯೋಗದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣವು ಬುದ್ಧಿಶಕ್ತಿಯನ್ನು ಬೆಳೆಸಿದರೆ, ಕ್ರೀಡೆ ವ್ಯಕ್ತಿತ್ವವನ್ನು ರೂಪಿಸುತ್ತದೆ. ಉತ್ತಮ ಶಿಕ್ಷಣ ಸಂಸ್ಥೆಗಳು ಇವೆರಡನ್ನೂ ಸಮನಾಗಿ ಪೆÇೀಷಿಸುತ್ತವೆ ಎನ್ನುವುದಕ್ಕೆ ಜೆಎಸ್‍ಎಸ್ ವಿಶ್ವವಿದ್ಯಾಲಯದ ದೃಷ್ಟಿಕೋನವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ಸುಮಾರು 132 ವಿಶ್ವವಿದ್ಯಾಲಯಗಳು ಪಾಲ್ಗೊಳ್ಳುತ್ತಿರುವ ಈ ಬೃಹತ್ ಪಂದ್ಯಾವಳಿ ಆಯೋಜನೆ ಸುಲಭವಲ್ಲ ಎಂದು ಹೇಳಿದ ಅವರು, ಯಶಸ್ವಿ ವ್ಯವಸ್ಥೆಗೆ ಕಾರಣರಾದ ಜೆಎಸ್‍ಎಸ್ ಎಸ್ಟಿಯು ಆಡಳಿತ ಮಂಡಳಿ, ಸಂಘಟನಾ ಸಮಿತಿ, ಸಿಬ್ಬಂದಿ ಹಾಗೂ ಸ್ವಯಂಸೇವಕರನ್ನು ಮನದಾಳದಿಂದ ಶ್ಲಾಘಿಸಿದರು. ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳಾಗಿ ಅಲ್ಲ, ಜೀವನದ ಪ್ರಮುಖ ಹಂತದಲ್ಲಿರುವ ಯುವ ಕ್ರಿಕೆಟಿಗರು ಹಾಗೂ ಕಲಿಕಾರ್ಥಿಗಳಾಗಿ ಅವರನ್ನು ನೋಡುತ್ತಿರುವುದಾಗಿ ಹೇಳಿದರು.
ಎಐಯು ಹೆಚ್ಚುವರಿ ಕಾರ್ಯದರ್ಶಿ ಮಮತಾ ರಾಣಿ ಅಗರ್ವಾಲ್ ಮಾತನಾಡಿ, ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟವು ವಿಶ್ವದ ಅತಿದೊಡ್ಡ ವಿಶ್ವವಿದ್ಯಾಲಯಗಳ ಸಂಘಟನೆಯಾಗಿದ್ದು, ದೇಶಾದ್ಯಂತ 58 ಕ್ರೀಡೆಗಳಲ್ಲಿ 250ಕ್ಕೂ ಹೆಚ್ಚು ಚಾಂಪಿಯನ್ಶಿಪ್ಗಳನ್ನು ನಡೆಸುತ್ತಿದೆ ಎಂದು ಹೇಳಿದರು. ಈ ಪಂದ್ಯಾವಳಿಯಲ್ಲಿ 132 ತಂಡಗಳ 2,000ಕ್ಕೂ ಹೆಚ್ಚು ಕ್ರೀಡಾಪಟುಗಳ ಭಾಗವಹಿಸುವಿಕೆ ದೇಶದ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾ ಸಾಮಥ್ರ್ಯವನ್ನು ಪ್ರತಿಬಿಂಬಿಸುತ್ತದೆ ಎಂದರು.
ಪಂದ್ಯಾವಳಿ ಜನವರಿ 27ರಿಂದ ಆರಂಭವಾಗಿ 11 ವಿವಿಧ ಮೈದಾನಗಳಲ್ಲಿ ನಡೆಯಲಿದ್ದು, ಫೆಬ್ರವರಿ 5ರಂದು ಅಂತಿಮ ಪಂದ್ಯ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟ್ಸೂರಮಠ್, ಜೆಎಸ್‍ಎಸ್ ಎಸ್ಟಿಯು ಕುಲಪತಿ ಎ.ಎನ್. ಸಂತೋಷ್ ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸಂಘಟನಾ ಕಾರ್ಯದರ್ಶಿ ರೇವಣ್ಣ ಸಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು


























