
ಸಂಜೆವಾಣಿ ವಾರ್ತೆ
ಹೊಸಪೇಟೆ, ಮೇ.06. ತಾಲೂಕಿನ ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡಿರುವ ವಿವಿಧ ಪುನಶ್ಚೇತನ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ ಮಂಗಳವಾರ ಪರಿಶೀಲಿಸಿದರು.
ತಾಲೂಕಿನ ಚಿಲಕನಹಟ್ಟಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿದ್ದ ಜಿ.ಪಂ. ಸಿಇಒ ನೋಂಗ್ಜಾಯ್ ಮೊಹಮದ್ ಅಲಿ ಅಕ್ರಂ ಷಾ ಹಾಗೂ ಜಿ.ಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ ಅವರು ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದ ಬಳಿಯ ಟೋಲ್ ಗೇಟ್ ನಿಂದ ಮುರಾರ್ಜಿ ವಸತಿ ಶಾಲೆ ವರೆಗೆ ಮಹಾತ್ಮ ಗಾಂಧಿ ನರೇಗಾ ಯೊಜನೆ ಅಡಿಯಲ್ಲಿ ಕೈಗೊಂಡಿರುವ ನಾಲಾ ಪುನಶ್ಚೆತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿ ಕಾರ್ಮಿಕರು ನಾಲಾ ಹೂಳೆತ್ತುವ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು.
ಅಲ್ಲದೆ ಇದೇ ಸಂದರ್ಭದಲ್ಲಿ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಕುಡಿಯುವ ನೀರು, ನೆರಳು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ವಿಶೇಷ ಚೇತನರಿಗೆ 60% ರಿಯಾಯಿತಿ, ಮಹಿಳೆಯರ ಭಾಗವಹಿಸುವಿಕೆ ಯನ್ನು ಹೆಚ್ಚಿಸುವುದರ ಕುರಿತು ಕೆಲಸಕ್ಕೆ ಬರುವವರಿಗೆ ಎನ್.ಆರ್.ಎಂ.ಎಸ್ s ಗಳನ್ನು ತೆಗೆಯುವಂತೆ ಪಿಡಿಓ ಗಳಿಗೆ ಸೂಚನೆ ನೀಡಿದರು. ಚಿಲಕನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಕೆಲಸ ಒದಗಿಸಲಾಗುವುದು ನರೇಗಾ ಕೂಲಿ ಕಾರ್ಮಿಕರ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂಡಿ ಆಲಂಭಾಷಾ, ತಾ.ಪಂ. ಸಹಾಯಕ ನಿರ್ದೇಶಕಿ ಕವಿತಾ ಕರ್ಣಂ, ತಾಲೂಕು ಪಂಚಾಯಿತಿ ಹೊಸಪೇಟೆ, ಎಡಿಪಿಸಿ ಬಸವರಾಜ, ಪಿಡಿಓ ವೀರಪ್ಪ, ಟಿ.ಐ.ಇ.ಸಿ ಹೆಚ್. ನಾಗರಾಜ್, ಟಿಸಿ ಆನಂದ, ಟಿಎ ಮಂಜುಳ ಹಾಗೂ ಬಿಎಫ್ಟಿ ಸೋಮಣ್ಣ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.




















