
ಮಂಗಳೂರು- ಎಲ್ಲಾ ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ರಸ್ತೆ ಸುರಕ್ಷತಾ ಅರಿವು ಮಾಸಾಚಾರಣೆ ಕಾರ್ಯಕ್ರಮವನ್ನು ಜನವರಿ ೧ ರಿಂದ ೩೧ ರವರೆಗೆ ಹಮ್ಮಿಕೊಳ್ಳಲಾಗಿದ್ದು, ಜನರು ಮಾರಕ ಖಾಯಿಲೆ ಕ್ಯಾನ್ಸರ್ನಿಂದ ಮೃತಪಡುವ ಪ್ರಮಾಣಕ್ಕಿಂತಲೂ ಹೆಚ್ಚಾಗಿ ಸಂಚಾರಿ ನಿಯಮಗಳನ್ನು ಪಾಲಿಸದೇ ಅಪಘಾತಗಳಿಂದ ಮೃತಪಡುತ್ತಿದ್ದಾರೆ. ಆದ್ದರಿಂದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಎಲ್ಲಾ ನಗರ, ಸ್ಥಳೀಯಾಡಳಿತ ಮತ್ತು ಗ್ರಾಮಾಂತರ ಆಡಳಿತ ವ್ಯಾಪ್ತಿಯಲ್ಲಿ ಜನವರಿ ಮಾಸವನ್ನು ರಸ್ತೆ ಸುರಕ್ಷತಾ ಮಾಸವನ್ನಾಗಿ ಆಚರಿಸಿ ಎಲ್ಲ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಪ್ರೇರೇಪಿಸುವ ಕೆಲಸವನ್ನು ಜಿಲ್ಲಾಡಳಿತದ ಸಹಕಾರ ಪಡೆದು ಮಾಡಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ್ ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಲಘು ವಾಹನಗಳ ಚಾಲಕರು ಸೀಟ್ ಬೆಲ್ಟ್ ಧರಿಸಿ ಪ್ರಯಾಣ ಮಾಡಿದರೆ ಶೇ.೯೦ರಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ಅಂಕಿ ಅಂಶಗಳು ಸಾಬೀತು ಪಡಿಸಿವೆ. ಅದೇ ರೀತಿ ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೇ ಮಾಡದಂತೆ ಪೊ?ಷಕರು ಮತ್ತು ಶಿಕ್ಷಕ ವರ್ಗದವರು ಅರಿವು ಮೂಡಿಸಬೇಕು. ಈ ಮಾಹಿತಿಯನ್ನು ಮತ್ತು ಅರಿವನ್ನು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರಿಗೂ ತಿಳಿಸುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಮಾಸವನ್ನು ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜನವರಿ ೩೧ ರವರೆಗೆ ‘ರಾಷ್ಟ್ರ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ’ಯನ್ನು ಆಯೋಜಿಸಲಾಗಿದ್ದು, ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

























