Home ಜಿಲ್ಲೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪಿಸುವಂತೆ ವಕೀಲರ ಧರಣಿ ಸತ್ಯಾಗ್ರಹ

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪಿಸುವಂತೆ ವಕೀಲರ ಧರಣಿ ಸತ್ಯಾಗ್ರಹ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಫೆ.21:
ಪಟ್ಟಣದಲ್ಲಿ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸ್ಥಾಪಿಸುವಂತೆ ಒತ್ತಾಯಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಅನಿರ್ಧಿಷ್ಠ ಕಾಲದ ಧರಣಿ ಸತ್ಯಾಗ್ರಹವನ್ನು ಆರಂಭಿಸಲಾಗಿದೆ.


ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಆರಂಭಗೊಂಡಿದ್ದು ಶಾಸಕ ಹೆಚ್.ಟಿ.ಮಂಜು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ವಕೀಲರ ಹೋರಾಟಕ್ಕೆ ನೈತಿಕ ಬೆಂಬಲ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರದಿಂದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೆರೆಯಲು ಘೋಷಣೆಯಾಗಿದೆ. ಆದರೆ ಹಣಕಾಸಿನ ಕೊರತೆಯಿಂದ ಇದು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.


ರಾಜ್ಯ ಸರ್ಕಾರ ಒಂದು ಕೋಟಿ ಅನುದಾನ ನೀಡಿದರೆ ಇದು ತಕ್ಷಣವೇ ಕಾರ್ಯರೂಪಕ್ಕೆ ಬರುತ್ತದೆ. ಜಿಲ್ಲಾ ನ್ಯಾಯಾಲಯ ಪಟ್ಟಣದ ನ್ಯಾಯಾಲಯ ಸಂಕೀರ್ಣದಲ್ಲಿ ಆರಂಭವಾದರೆ ಜನರಿಗೆ ಅನುಕೂಲವಾಗುತ್ತದೆ. ನಾನು ಈ ಕುರಿತು ಸರ್ಕಾರದೊಂದಿಗೆ ವ್ಯವಹರಿಸುವುದಾಗಿ ತಿಳಿಸಿದರು.


ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ ಮಾತನಾಡಿ ಕೆ.ಆರ್.ಪೇಟೆ ಪಟ್ಟಣ ಜಿಲ್ಲಾ ಕೇಂದ್ರದಿಂದ ಸುಮಾರು 75 ಕಿ.ಮೀ ದೂರವಿದೆ. ತಾಲೂಕಿನಿಂದ ಅತಿ ಹೆಚ್ಚು ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿವೆ. ಬಹುತೇಕ ಪ್ರಕರಣಗಳು ಮಂಡ್ಯದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಬಾಕಿಯಿದ್ದು ವಕೀಲರು ಮತ್ತು ಸಾರ್ವಜನಿಕರು ಪ್ರತಿಭಾರಿ ವಿಚಾರಣೆಗೆ ಮಂಡ್ಯ ನಗರಕ್ಕೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆಯಿದೆ. ಕೆ.ಆರ್.ಪೇಟೆ ತಾಲೂಕು ಕೇಂದ್ರದಿಂದ ಗಡಿ ಗ್ರಾಮಗಳು ಕನಿಷ್ಠ 30 ಕಿ.ಮೀ ದೂರವಿದ್ದು ಕಕ್ಷಿದಾರರು ಪಟ್ಟಣದ ನ್ಯಾಯಾಲಯಕ್ಕೆ ಬರುವುದಕ್ಕೆ ಸಂಕಷ್ಠಪಡಬೇಕಾಗಿದೆ. ಪಟ್ಟಣದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಥಾಪಿಸಲು ಸೂಕ್ತ ಕಟ್ಟಡದ ವ್ಯವಸ್ಥೆಯಿದೆ. ಕಟ್ಟಡ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನದ ಅಗತ್ಯವಿಲ್ಲ. ಕೇವಲ ಕಚೇರಿ ಸ್ಥಾಪನೆಗೆ ಬೇಕಾದ ಕೆಲವೇ ಲಕ್ಷಗಳ ಅನುದಾನ ನೀಡಿದರೆ ಸಾಕು. ಪಟ್ಟಣದಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ ಸ್ಥಾಪನೆಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆಂದರು.


ನ್ಯಾಯಾಲಯದ ಕಲಾಪಗಳಿಗೆ ಧಕ್ಕೆಯಾಗದಂತೆ ನಮ್ಮ ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಠ ಕಾಲದ ಧರಣಿ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ನಾಗೇಗೌಡ ತಿಳಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್.ಆರ್.ರವಿಶಂಕರ್, ಸಾಕ್ಷೀಬೀಡು ನವೀನ್‍ಕುಮಾರ್, ಎಂ.ಆರ್.ಪ್ರಸನ್ನ ಕುಮಾರ್, ಪ್ರವೀಣ್ ಕುಮಾರ್, ಚಾಮಿಕೊಪ್ಪಲು ಮೋಹನ್, ಕೆ.ಎನ್.ನಾಗರಾಜು, ಹೊನ್ನೇನಹಳ್ಳಿ ರವಿ, ಕೃಷ್ಣಕುಮಾರ್, ವಡ್ಡರಹಳ್ಳಿ ಧನಂಜಯ ಕುಮಾರ್, ಕಿಕ್ಕೇರಿ ಮಹೇಶ್, ಪುರ ಮಂಜುನಾಥ್,ಶಂಕರೇಗೌಡ, ಸೇರಿದಂತೆ ಹಲವಾರು ವಕೀಲರು ಪ್ರತಿಭಟನೆಯಲ್ಲಿದ್ದರು.