ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆ ಏರ್ಪಡಿಸಿ: ಉದಯಕುಮಾರ್

ಸಂಜೆವಾಣಿ ನ್ಯೂಸ್
ಮೈಸೂರು.ಡಿ.31:-
ಜಿಲ್ಲೆಯ 232 ಪ್ರೌಢಶಾಲೆಗಳ ಪೈಕಿ 47 ಕಡೆ ಸಂಗೀತ ಶಿಕ್ಷಕರಿದ್ದು ಎಲ್ಲರೂ ಸೇರಿ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಡಿಡಿಪಿಐ ಡಿ.ಉದಯಕುಮಾರ್ ಸಲಹೆ ಮಾಡಿದರು.


ನಗರದ ನಜರ್‍ಬಾದಿನ ಪೀಪಲ್ಸ್ ಪಾರ್ಕ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಾಧಾರಣ ಭಾಷೆಯಿಂದ ಭಗವಂತನನ್ನು ಒಲಿಸಿಕೊಳ್ಳಲಾಗದು. ಆದ್ದರಿಂದಲೇ ಭಗವಂತನ ಭಾಷೆಯಾದ ಸಂಗೀತ ಸೃಷ್ಟಿಯಾಯಿತು ಎಂಬ ಮಾತಿದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆ, ಸಾಹಿತ್ಯ, ಸಂಗೀತ ಸ್ಪರ್ಧೆಗಳಲ್ಲೂ ಭಾಗವಹಿಸಬೇಕು ಎಂದು ಹೇಳಿದರು.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ, ಉತ್ತಮ ಫಲಿತಾಂಶ ಪಡೆಯಬೇಕು. ನಂತರ ಪಿಯುಸಿಯಲ್ಲಿ ಕೂಡ ಉತ್ತಮ ಅಂಕ ಪಡೆದು, ಮುಂಬರುವ ಜವಾಬ್ದಾರಿಯನ್ನು ನಿರ್ವಹಿಸಬೇಕು.


ಸಂಗೀತಗೋಷ್ಠಿಯನ್ನು ಡಯಟ್ ಪ್ರಾಂಶುಪಾಲ ನಾಗರಾಜಯ್ಯ ಉದ್ಘಾಟಿಸಿದರು. ಎಸ್‍ಡಿಎಂಸಿ ಅಧ್ಯಕ್ಷ ಎ.ಟಿ.ಆನಂದ್ ಅಧ್ಯಕ್ಷತೆ ವಹಿಸಿದ್ದರು. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಕೆ.ಆರ್.ವೆಂಕಟೇಶ್ ವಿಶೇಷ ಆಹ್ವಾನಿತರಾಗಿದ್ದರು. ಉತ್ತರ ವಲಯದ ಬಿಇಒ ರೇವಣ್ಣ, ಜಿಪಂ ಪಿಎಂ ಪೆÇೀಷಣ್ ಶಿಕ್ಷಣಾಧಿಕಾರಿ ಕೃಷ್ಣ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ, ಸುಧಾಮಣಿ, ಬಿಆರ್‍ಸಿ ಅರ್ಪಣಾ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಲಿಂಗರಾಜು, ಅತಿಥಿಗಳಾಗಿದ್ದರು. ಎಸ್‍ಡಿಎಂಸಿ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸದಸ್ಯ ಆಸೀರ್ ಉಲ್ಲಾ ಖಾನ್ ಉಪಸ್ಥಿತರಿದ್ದರು.


ಉಪ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನಸ್ವಾಮಿ ಸ್ವಾಗತಿಸಿದರು. ಲಕುಮಿ, ಮಾನ್ಯಶ್ರೀ, ಮಹಾಲಕ್ಷ್ಮಿ, ಅನುಶ್ರೀ ಮತ್ತು ತಂಡದವರು ಸಂಗೀತ ಶಿಕ್ಷಕ ಎಂ.ಬಿ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಪಡೆದವರು, ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ಕ್ರೀಡೆಯಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಿದವರಿಗೆ, ಸಾಹಿತ್ಯ, ಸಂಗೀತ ಸ್ಪರ್ಧೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳು ಹಾಗೂ ಸಂಗೀತ ಶಿಕ್ಷಕರ ನೇತೃತ್ವದಲ್ಲಿ ಪಿಳ್ಳರಿ ಗೀತೆಗಳ ಗಾಯನ ಗೋಷ್ಠಿ, ಕೆ.ಆರ್. ವೆಂಕಟೇಶ್ ಅವರಿಂದ ಭಕ್ತಿ ಸಂಗೀತ ಗೋಷ್ಠಿ, ಚಿಕ್ಕಣ್ಣಾಚಾರ್ ನೇತೃತ್ವದಲ್ಲಿ ವಿವಿಧ ಕಲಾವಿದರಿಂದ ವಾದ್ಯಸಂಗೀತ ಗೋಷ್ಠಿ ನಡೆದವು.