
ಮಂಗಳೂರು-ಗೃಹಲಕ್ಷ್ಮಿ ಯೋಜನೆಯಡಿ ಮರಣ ಹೊಂದಿರುವ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುವ ಹಣವನ್ನು ನಿಯಮಾನುಸಾರ ಹಿಂಪಡೆಯುವುದರೊಂದಿಗೆ, ಹಿಂಪಡೆದ ಮೊತ್ತವನ್ನು ಸರಕಾರಕ್ಕೆ ಶೇಕಡಾ ೧೦೦ ರಷ್ಟು ಮರುಜಮೆ ಮಾಡಲು ಅಗತ್ಯ ಕ್ರಮವಹಿಸಬೇಕು. ಮೃತ ಫಲಾನುಭವಿಗಳ ಖಾತೆಯಿಂದ ಎಷ್ಟು ಹಣ ಡ್ರಾ ಮಾಡಲಾಗಿದೆ? ಎಷ್ಟು ಬ್ಯಾಂಕ್ ಖಾತೆಯಲ್ಲಿ ಜಮೆಯಾಗಿದೆ ಎಂಬ ಮಾಹಿತಿ ಅಗತ್ಯವಿರುವುದರಿಂದ, ಈ ನಿಟ್ಟಿನಲ್ಲಿ ಆಯಾಯ ತಾಲೂಕಿನಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಲೂಕು ಗ್ಯಾರಂಟಿ ಅಧ್ಯಕ್ಷರು ಹಾಗೂ ಲೀಡ್ಬ್ಯಾಂಕ್ ಅಧಿಕಾರಿಗಳೊಂದಿಗೆ ಜಂಟಿ ಸಭೆಯನ್ನು ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದ್ದಾರೆ.
ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂಬಂಧ, ಮರಣ ಹೊಂದಿರುವ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ, ಅವರ ಖಾತೆಗಳಿಗೆ ಜಮೆಯಾಗಿರುವ ಮೊತ್ತವನ್ನು ಗುರುತಿಸಿ, ನಿಯಮಾನುಸಾರ ವಸೂಲಿ ಹಾಗೂ ಶೇಕಡಾ ೧೦೦ ರಷ್ಟು ಮರುಜಮೆ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಅಕ್ಕಿ ಚೀಲಗಳನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ನ್ಯಾಯಬೆಲೆ ಅಂಗಡಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅರ್ಕುಳದಲ್ಲಿ ಬೊಂಡಂತಿಲ ಹೊಸ ರೇಶನ್ ಅಂಗಡಿ ಪ್ರಾರಂಭ ಮಾಡುವ ಬಗ್ಗೆ ಗ್ಯಾರಂಟಿ ಸದಸ್ಯರು ಪ್ರಸ್ತಾಪಿಸಿದಾಗ, ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಗಿರುತ್ತದೆ. ೧೦೦೦ ಕ್ಕಿಂತ ಹೆಚ್ಚು ಕಾರ್ಡ್ ಇರುವುದನ್ನು ಪಟ್ಟಿ ಮಾಡಿ ಅದರಲ್ಲಿ ಎಸ್.ಸಿ./ಎಸ್.ಟಿ. ಶೇ.೪೦ರಷ್ಟು ಜನಸಂಖ್ಯೆ ಇರುವ ಬಗ್ಗೆ ಪಟ್ಟಿಯನ್ನು ತಯಾರಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದ ನೆಲೆಯಲ್ಲಿ ಪಟ್ಟಿಯನ್ನು ತಯಾರಿಸಿ ಜಿಲ್ಲಾಧಿಕಾರಿಯವರ ದಿನಾಂಕ ಪಡೆದು ಜಿಲ್ಲಾಧಿಕಾರಿಯವರ ಸೂಚನೆಯಂತೆ ಅಧಿಸೂಚನೆಯನ್ನು ಹೊರಡಿಸಲು ಕ್ರಮವಹಿಸಲಾಗುತ್ತದೆ. ಕಳೆದ ೫ ವರ್ಷದ ಹಿಂದೆ ಇ-ಕೆವೈಸಿ ಮಾಡಿರುವ ಎಲ್ಲಾ ಪ್ರಕರಣಗಳಿಗೆ ಈಗ ಮತ್ತೊಮ್ಮೆ ಅಕ್ಟೋಬರ್ ೨೦ ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಲು ನಿರ್ದೇಶನವಿರುತ್ತದೆ. ೬,೬೨,೧೯೫ ಫಲಾನುಭವಿಗಳ ಪೈಕಿ ಶೇ.೫೮ ರಷ್ಟು ಫಲಾನುಭವಿಗಳ ಇ-ಕೆವೈಸಿ ಮಾಡಲಾಗಿರುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಗೋದಾಮಿನ ಒಳಗೆ ಅಕ್ಕಿ ಬಂದ ನಂತರ ಅಕ್ಕಿಯ ಗುಣಮಟ್ಟ ನಿರ್ವಹಣೆ ಮಾಡಬೇಕು. ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಣೆ ಮಾಡುವಾಗ ಅಕ್ಕಿ ಚೆಲ್ಲಿ ಹಾಳಾಗುತ್ತದೆ. ಅದನ್ನು ತಡೆಯುವ ಬಗ್ಗೆ ಸೂಕ್ತ ನಿರ್ದೇಶನವನ್ನು ನ್ಯಾಯಬೆಲೆ ಅಂಗಡಿಗಳಿಗೆ ನೀಡಬೇಕೆಂದು ಪುತ್ತೂರು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನು??ಠನ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದಾಗ, ಅಕ್ಕಿ ವಿತರಣೆ ಸಮಯದಲ್ಲಿ ಚೆಲ್ಲದಂತೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು \ ಜಿಲ್ಲೆಯ ಎಲ್ಲಾ ಆಹಾರ ಶಿರಸೇದಾರರು/ನಿರೀಕ್ಷಕರುಗಳ ಸಭೆಯನ್ನು ನಡೆಸಿ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕುಪ್ಪೆಪದವು-ಬಿಸಿರೋಡ್ ಹಾಗೂ ಕುಪ್ಪೆಪದವು?ಮೂಡಬಿದಿರೆ ಮಾರ್ಗಗಳಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ಗ್ಯಾರಂಟಿ ಅಧ್ಯಕ್ಷರು ವಿಷಯ ಪ್ರಸ್ತಾಪಿಸಿದಾಗ, ಅದಕ್ಕೆ ಉತ್ತರಿಸಿದ ಅಧಿಕಾರಿಗಳು ಸದರಿ ಮಾರ್ಗಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಅಗತ್ಯವಿರುವ ಪರ್ಮಿಟ್ ದೊರೆತಿಲ್ಲ ಎಂದು ತಿಳಿಸಿದರು. ಪ್ರತಿಯೊಂದು ಗ್ರಾಮದಿಂದಲೂ ಕೆಎಸ್ಆರ್ಟಿಸಿ ಬಸ್ಗಳ ಸಂಚಾರಕ್ಕೆ ಬೇಡಿಕೆ ಇದ್ದು, ಈವರೆಗೆ ಯಾವುದೇ ಪರ್ಮಿಟ್ ನೀಡಲಾಗಿಲ್ಲ ಎಂದು ತಿಳಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಶಕ್ತಿ ಯೋಜನೆಯ ಪ್ರಯೋಜನದಿಂದಲೂ ವಂಚಿತರಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಕೆಎಸ್ಆರ್ಟಿಸಿಗೆ ಪರ್ಮಿಟ್ ನೀಡದಿರುವ ಕಾರಣ ಹಾಗೂ ಪರ್ಮಿಟ್ ಅರ್ಜಿಯನ್ನು ತಿರಸ್ಕರಿಸಲಾಗಿದೆಯೇ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಭಾರತ್ ಜೋಡೋ ಯುವ ಸಂಘ
ಭಾರತ್ ಜೋಡೋ ಯುವ ಸಂಘಗಳ ಬಗ್ಗೆ ಸಭೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಸಭೆಗೆ ಮಾಹಿತಿ ನೀಡಿದರು. ಪ್ರಸ್ತುತ ಆಫ್ಲೈನ್ ನಮೂನೆಗಳು ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು, ಪಂಚಾಯತ್ಗಳಲ್ಲಿ ವಿತರಿಸಲಾಗಿದ್ದು, ಈ ಸಂಬಂಧ ಗ್ಯಾರಂಟಿ ಸದಸ್ಯರು ನಮೂನೆಗಳನ್ನು ಭರ್ತಿ ಮಾಡಲು ಸಂಪೂರ್ಣ ಸಹಕಾರ ನೀಡಲು ಕೋರಿದರು.
ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಜೋಕಿಂ ಡಿಸೋಜಾ, ಸುರೇಖಾ ಚಂದ್ರಹಾಸ್, ನಾರಾಯಣ ನಾಯಕ್, ಹಾಗೂ ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹಾ, ಜಯಂತಿ ಬಿಎ, ಶಾಹುಲ್ ಹಮೀದ್ ಕೆ, ಉಮಾನಾಥ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ಸುಧೀರ್ ಕುಮಾರ್ ಶೆಟ್ಟಿ, ಸುರೇಂದ್ರ ಕಂಬಳಿ, ಆಲಿಸ್ಟನ್ ಕ್ಲೈವ್ ಡಿ ಕುನ್ಹಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.


























