ಬೆಂಗಳೂರು.ಅ.೪- ೯೪ ವರ್ಷಗಳ ನಂತರ ಸರ್ಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಜೊತೆಯಲ್ಲಿ ಜಾತಿಗಣತಿಯ ನಿರ್ಧಾರ ಮಾಡಿ ಸೆಪ್ಟೆಂಬರ್ ೨೨ರಿಂದ ಕಾರ್ಯಾರಂಭ ಮಾಡಿದೆ. ಪ್ರತಿ ಜನಾಂಗದವರಿಗೂ ಈ ಸಮೀಕ್ಷೆ ನಮ್ಮ ನಮ್ಮ ಮಕ್ಕಳ ಮತ್ತು ಜನಾಂಗದ ಭವಿಷ್ಯದ ದೃಷ್ಟಿಯಿಂದ ಬಹು ಮುಖ್ಯವಾಗಿದೆ.
೬೦ ವಿವಿಧ ವಿಷಯಗಳೊಂದಿಗೆ ಗಣತಿದಾರರು ಮನೆಗಳಿಗೆ ಬಂದಾಗ ತಪ್ಪದೇ ಇದ್ದು, ಮಾಹಿತಿಯನ್ನು ನಿಖರವಾಗಿ, ತಿಳಿಸಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ,ನಿರ್ಮಾಲಾನಂದನಾಥ ಮಹಾಸ್ವಾಮೀಜಿಯವರು ತಿಳಿಸಿದ್ದಾರೆ.. ಧರ್ಮದ ಕಾಲಂ ೮ರಲ್ಲಿ ಹಿಂದೂ ಎಂದೂ, ಜಾತಿ ಕಾಲಂ ೯ರಲ್ಲಿ ಒಕ್ಕಲಿಗ ಎಂದೂ, ಕಾಲಂ ೧೦ರಲ್ಲಿ ಉಪಜಾತಿಯನ್ನು ಒಕ್ಕಲಿಗ ಎಂದೇ ಬರೆಸಿ.ಎಂದು ಮನವಿ ಮಾಡಿದರು.
ಒಕ್ಕಲಿಗ ಜನಾಂಗವನ್ನು ವ್ಯವಹಾರಿಕ ಭಾಷೆಯಲ್ಲಿ ಗೌಡ ಎಂದು ಹೇಳುತ್ತೇವೆ. ಆದರೆ, ಸಮೀಕ್ಷೆ ಸಂದರ್ಭದಲ್ಲಿ ಎಲ್ಲಿಯೂ ಗೌಡ ಎಂಬುದನ್ನು ನಮೂದಿಸಬೇಡಿ, ಬರೆಸಬೇಡಿ. ನಮ್ಮ ಉಪಜಾತಿಗಳು ಕುಟುಂಬದ ಸಾಂಸ್ಕೃತಿಕ ಆಚರಣೆಗೆ ಸೀಮಿತವಾಗಿರಬೇಕೇ ಹೊರತು ದಾಖಲೆಯಲ್ಲಿ ಅಲ್ಲ. ನಾವೆಲ್ಲ ಒಂದೇ ಜಾತಿ ಅದು ಒಕ್ಕಲಿಗ ಕೋಡ್ ನಂಬರ್ ೧೫೪೧. ಒಂದು ವೇಳೆ ಗಣತಿದಾರರು ಮನೆಗೆ ಬಂದಾಗ ನಾವು ಮನೆಯಲ್ಲಿ ಇಲ್ಲದಿದ್ದರೆ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವೆಬ್ ಸೈಟ್ ನಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಿ ಅಪ್ ಲೋಡ್ ಮಾಡಬಹುದು.
ಈ ಸಂದರ್ಭದಲ್ಲಿ ಏನೇ ಕೆಲಸವಿದ್ದರೂ ೯೪ ವರ್ಷಗಳ ನಂತರ ನಡೆಯುವ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಿ ಸಹಕರಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.























