Home ಜಿಲ್ಲೆ ಮೈಸೂರು ಜಾತಿ, ಮೇಲು-ಕೀಳು ಎಂದು ನೋಡದೆ ಸಮಾನ ಅಂತಸ್ತು, ಅವಕಾಶಗಳನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬುದೇ ನಾಲ್ವಡಿ ಆಶಯ

ಜಾತಿ, ಮೇಲು-ಕೀಳು ಎಂದು ನೋಡದೆ ಸಮಾನ ಅಂತಸ್ತು, ಅವಕಾಶಗಳನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬುದೇ ನಾಲ್ವಡಿ ಆಶಯ

ಸಂಜೆವಾಣಿ ನ್ಯೂಸ್
ಮೈಸೂರು, ಜೂ.8:-
ಜಾತಿ, ಮೇಲು-ಕೀಳು ಎಂದು ನೋಡದೆ ಸಮಾನ ಅಂತಸ್ತು, ಅವಕಾಶಗಳನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬುದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯವಾಗಿತ್ತು ಎಂದು ಇತಿಹಾಸ ತಜ್ಞ ಪೆÇ್ರ.ಪಿ.ವಿ. ನಂಜರಾಜ ಅರಸು ಅಭಿಪ್ರಾಯಪಟ್ಟರು.


ಚಾರ್ವಾಕ ಸಂಸ್ಥೆ ವತಿಯಿಂದ ರಂಗಾಯಣದ ಶ್ರೀರಂಗಮಂದಿರದಲ್ಲಿ ನಾಲ್ವಡಿ ಕೃಷ್ಣರಾಜ ಜಯಂತಿ ಅಂಗವಾಗಿ ಆಯೋಜಿಸಿದ್ದ ಅಹಿಂದ ಚಳವಳಿಯ ಹರಿಕಾರ, ರಾಜ ಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ದಲಿತರನ್ನು ಇಂದಿಗೂ ಮನೆಯೊಳಗೆ ಸೇರಿಸದ ಮನಸ್ಥಿತಿ ಇದೆ. ಆದರೆ, ನಾಲ್ವಡಿ 1936ರಲ್ಲೇ ದಲಿತರಿಗೆ ದಸರಾ, ಅರಮನೆಗೆ ಪ್ರವೇಶ ನೀಡಿದ್ದರು ಎಂದು ಹೇಳಿದರು.


ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ, ನಾಲ್ವಡಿ ಆಧುನಿಕ ಮೈಸೂರಿನ ನಿರ್ಮಾತೃ. ಅಹಿಂದ ಈಚಿನ ದಿನಗಳಲ್ಲಿ ಜಾತಿ ಸಮೀಕರಣದ ಬ್ರಾಂಡ್ ಆಗಿದೆ. ಆದರೆ, ನಾಲ್ವಡಿಯವರು ಅಂದೇ ಜಾತಿ ಹೆಸರೇಳದೆ ಚಳವಳಿಗೆ ಮುನ್ನುಡಿ ಬರೆದರು. ರಾಜಪ್ರಭುತ್ವದ ಒಳಗೂ ಪ್ರಜಾಪ್ರಭುತ್ವದ ಆಶಯಗಳನ್ನು ಗಟ್ಟಿಗೊಳಿಸಿದರು ಎಂದರು.


ಜನಪ್ರತಿನಿಧಿ ಸ್ಥಾಪನೆ ಮಾಡಿದ ನಾಲ್ವಡಿ, ಹೊಸ ಪ್ರಯೋಗದ ಮೂಲಕ ಜನರತ್ತ ಅಧಿಕಾರ ಕೊಂಡೊಯ್ದರು. ದಲಿತರಿಗೆ ಪ್ರಾತಿನಿದ್ಯ ಕೊಟ್ಟರು. ನಾಮ ನಿರ್ದೇಶನದ ಜತೆಗೆ ಮೀಸಲಾತಿ ಕೊಟ್ಟರು. ಆ ಕಾರಣಕ್ಕೆ ಚೆಲುವಯ್ಯ, ಮುರುಗೇಶ್ ಪಿಳ್ಳೈ ಅಂತಹವರಿಗೆ ಶಾಸಕ ಸ್ಥಾನ ನೀಡಿದರು. ಇದೇ ಮೊದಲ ಬಾರಿಗೆ ದಲಿತರಿಗೆ ಅಧಿಕಾರ ಸಿಕ್ಕಿತು. ನಂತರದಲ್ಲಿ ದಲಿತರಿಗೆ ಶಿಕ್ಷಣದ ಅವಕಾಶ ನೀಡಿದರು. ಅಲ್ಲಿಂದ ಅಹಿಂದ ಪರಿಕಲ್ಪನೆ ಬೆಳೆಯಿತು. ಅವರ ಆಡಳಿತದಲ್ಲಿ ಈ ಆಶಯಗಳು ಹಾಸುಹೊಕ್ಕಾದವು. ಈಗಿನ ವ್ಯವಸ್ಥೆಯಲ್ಲಿ ಜಾತಿ ಆಧಾರದ ಮೇಲೆ ಸಂಪತ್ತಿನ ಗಳಿಕೆ ನಿರ್ಧಾರ ಮಾಡುವ ಮನಸ್ಥಿತಿ ಹೆಚ್ಚಿದೆ. ದಲಿತರ ಏಳ್ಗೆಯನ್ನು ಸಹಿಸದ ಮನಸ್ಥಿತಿ ಹೆಚ್ಚುತ್ತಿದೆ ಎಂದು ವಿಷಾದಿಸಿದರು.


ಸ್ವಾತಂತ್ರ್ಯ ಭಾರತದಲ್ಲಿ ಮೇಲ್ವರ್ಗಗಳ ಅಧಿಪತ್ಯ ಸ್ಥಾಪಿಸಲು ಅಹಿಂದ ಚಳವಳಿ ಆರಂಭಗೊಂಡಿತು. ಸ್ವಾತಂತ್ರ್ಯ ಬಂದು 80 ವರ್ಷಗಳಾದರೂ ಸಂವಿಧಾನ ಜಾರಿಗೊಂಡು 75 ವರ್ಷಗಳಾದರೂ ನಾಲ್ವಡಿಯವರ ಅಹಿಂದದ ಮೂಲ ಉದ್ದೇಶ ಈಡೇರಲಿಲ್ಲ. ಹಿಂದುತ್ವ ಮತ್ತು ಮೀಸಲಾತಿಯಿಂದ ಅಹಿಂದಕ್ಕೆ ಸೋಲಾಯಿತು. ದಲಿತರು-ಮುಸ್ಲಿಂರು ಒಂದಾಗಲು ಬಿಟ್ಟಿಲ್ಲ. ಅಲ್ಪಸಂಖ್ಯಾತರು ಅಲ್ಪರಾಗಿ ಹಿಂದುಳಿದವರು ಹೀನರಾಗಿ ದಲಿತರನ್ನು ದಡ್ಡರನ್ನಾಗಿ ರೂಪಿಸಲಾಗಿದೆ. ಪ್ರತಿಯೊಬ್ಬ ತಲೆಯೊಳಗೆ ಹಿಂದುತ್ವವನ್ನು ನಾಟಿಸಲಾಗಿದೆ ಎಂದು ನುಡಿದರು.


ಒಡನಾಡಿ ಸಂಸ್ಥೆ ಮುಖ್ಯಸ್ಥ ಸ್ಟ್ಯಾನ್ಲಿ ಮಾತನಾಡಿ, ರಾಜಪೆÇೀಷಾಕು ಇಲ್ಲದ ಜನಸೇವಕ ನಾಲ್ವಡಿ. ಚಾಮರಾಜೇಂದ್ರ ಒಡೆಯರ್, ಕೆಂಪನಂಜಮ್ಮಣ್ಣಿ ಅವರಿಂದಲೇ ನಾಲ್ವಡಿಯರಿಗೆ ಎಲ್ಲ ರೀತಿಯ ಸಂಸ್ಕಾರ ಬಂದಿತು. ಸಮರ್ಥ ಆಡಳಿಗಾರನನ್ನಾಗಿ ರೂಪಿಸಿದ್ದು ಕೆಂಪನಂಜಮ್ಮಣ್ಣಿಯವರು. ನನ್ನ ನಂಬಿರುವ ಬಡಜನರು ಉದ್ಧಾರ ಆಗಬೇಕೆಂಬುದು ನಾಲ್ವಡಿಯರ ಕನಸು ಮತ್ತು ಗುರಿಯಾಗಿತ್ತು ಎಂದರು.


ಪ್ರಜ್ಞಾ ಟ್ರಸ್ಟ್ ಸೋಸಲೆ ಸಿದ್ದರಾಜು ಮಾತನಾಡಿ, ನಾಲ್ವಡಿಯವರು ಸಕಲ ಅನುಕೂಲ ಪಡೆದುಕೊಂಡ ಸಮುದಾಯಗಳು ಅವರ ಸ್ಮರಣೆ ಮಾಡುತ್ತಿಲ್ಲ. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವನ್ನು ಅವಲೋಕನೆ ಮಾಡಿದರೆ ನಾಲ್ವಡಿಯವರ ಸಾಧನೆ ಅರಿಯಬಹುದು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಉತ್ತನಹಳ್ಳಿ ಶಿವಣ್ಣ, ಗ್ರಾಮಾಂತರ ಕಾಂಗ್ರೆಸ್ ಸಮಿತಿ ಹಿರಿಯ ಕಾರ್ಯದರ್ಶಿ ಜಮೀರ್ ಅಹಮದ್, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ದ್ಯಾವಪ್ಪನಾಯಕ ಇದ್ದರು.