ಜಾಣ-ಜಾಣಿಯರ ನಗೆ ಜಾಗರಣೆ ಮಹೋತ್ಸವ ಉದ್ಘಾಟನೆ

ಬೆಂಗಳೂರು, ಫೆ.17:- ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಜಯನಗರದ ಹಂಪಿನಗರದ ಚಂದ್ರಶೇಖರ್ ಆಟದ ಮೈದಾನದಲ್ಲಿ ಫೆ.14ರಂದು ಆಯೋಜಿಸಿದ್ದ “ಜಾಣ-ಜಾಣಿಯರ ನಗೆ ಜಾಗರಣೆ ಮಹೋತ್ಸವ”ವನ್ನು ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರು ಉದ್ಘಾಟಿಸಿದರು. ಭಕ್ತಿ, ಸಂಸ್ಕೃತಿ ಹಾಗೂ ಮನರಂಜನೆಯ ಸಂಗಮವಾಗಿ ಇಡೀ ರಾತ್ರಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಕುಟುಂಬ ಸಮೇತರಾಗಿ ಭಾಗವಹಿಸಿ ಶಿವರಾತ್ರಿ ಸಂಭ್ರಮವನ್ನು ಅನುಭವಿಸಿದರು.


ಕಾರ್ಯಕ್ರಮದ ಆರಂಭದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ದೀಪಾರಾಧನೆ ಹಾಗೂ ಶಿವನಾಮ ಸ್ಮರಣೆಯೊಂದಿಗೆ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಯಿತು. ನಂತರ ನಗೆ ಜಾಗರಣೆಯ ಅಂಗವಾಗಿ ಪ್ರಸಿದ್ಧ ಹಾಸ್ಯ ಕಲಾವಿದರು ಗಂಗಾವತಿ ಪ್ರಾಣೇಶ್, ಎಂ.ಎಸ್. ನರಸಿಂಹಮೂರ್ತಿ, ಕೃಷ್ಣೇಗೌಡ, ಮಿಮಿಕ್ರಿ ದಯಾನಂದ, ಜೋಷಿ, ಬಸವರಾಜ್ ಮಾಮನಿ ಸೇರಿದಂತೆ ಅನೇಕ ಕಲಾವಿದರು ತಮ್ಮ ಹಾಸ್ಯ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಮನರಂಜಿಸಿದರು. ಜಾದೂ ಪ್ರದರ್ಶನ, ಮಾತನಾಡುವ ಗೊಂಬೆಯ ಕಾರ್ಯಕ್ರಮ, ರಸಪ್ರಶ್ನೆ ಸ್ಪರ್ಧೆ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಾಸ್ಯ ಸನ್ನಿವೇಶ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.ಇದೇ ಸಂದರ್ಭದಲ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಸುಮಾ ಸುಧೀಂದ್ರ ಅವರನ್ನು ಸನ್ಮಾನಿಸಲಾಯಿತು. ಬಳಿಕ ಅವರಿಂದ ನಡೆದ ಭರತನಾಟ್ಯ ನೃತ್ಯ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.


ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಕೃಷ್ಣ, ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಕೃಷ್ಣಪ್ಪ ಹಾಗೂ ಸ್ಥಳೀಯ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.
ಮಹಾಶಿವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುವ ಉದ್ದೇಶದಿಂದ ಭಕ್ತಿ, ಸಂಸ್ಕೃತಿ ಮತ್ತು ಹಾಸ್ಯವನ್ನು ಒಟ್ಟುಗೂಡಿಸಿ ಈ ಮಹೋತ್ಸವವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಅಪಾರ ಸ್ಪಂದನೆ ವ್ಯಕ್ತವಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.