
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.17: ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ನ (ಬಿಐಟಿಎಂ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಹಾಯಪ್ರಾಧ್ಯಾಪಕರಾದ ಡಾ. ಜವಳಕರ್ ವಿನಯ್ ಕುಮಾರ್ ಅವರು “ಸ್ಟಡಿ ಅಂಡ್ ಕ್ಯಾರೆಕ್ಟರೈಝೇಷನ್ ಆಫ್ ಬಯೋಸೆನ್ಸರ್ ಯೂಸ್ಡ್ ಫಾರ್ ಹಾರ್ಮೋನ್ ಡಿಟೆಕ್ಷನ್ ಇನ್ ವುಮೆನ್ ಹ್ಯಾವಿಂಗ್ ಕಾರ್ಡಿಯಾಕ್ ಡಿಸೀಸಸ್ ಡ್ಯೂರಿಂಗ್ ಪೋಸ್ಟ್ ಮೆನೋಪಾಸ್” ಎಂಬ ವಿಷಯದ ಕುರಿತಾಗಿ ಪಿಎಚ್.ಡಿ ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಯಶಸ್ವಿಯಾಗಿ ಪಡೆದಿದ್ದಾರೆ.
ಈ ಸಂಶೋಧನೆ ಅವರು ಬೆಂಗಳೂರು ಆರ್‌ವಿ ಎಂಜಿನಿಯರಿಂಗ್ ಕಾಲೇಜಿನ ಇಸಿಇ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಶೈಲಶ್ರೀ ಎನ್ ಅವರ ಮಾರ್ಗದರ್ಶನದಲ್ಲಿ ನೆರವೇರಿಸಿದ್ದಾರೆ.
ಮೆನೋಪಾಸ್ ನಂತರ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವ ಮಹಿಳೆಯರಲ್ಲಿ ಹಾರ್ಮೋನ್‌ನ ಪತ್ತೆಗಾಗಿ ಬಳಸುವ ಬಯೋಸೆನ್ಸರ್‌ಗಳ ಅಧ್ಯಯನ ಹಾಗೂ ಗುಣಲಕ್ಷಣಗಳ ವಿಶ್ಲೇಷಣೆಗೆ ಈ ಸಂಶೋಧನೆ ಮುಖ್ಯವಾಗಿದೆ. ಮಹಿಳಾ ಆರೋಗ್ಯ ಮತ್ತು ಜೈವ ವೈದ್ಯಕೀಯ ತಂತ್ರಜ್ಞಾನದ ಕ್ಷೇತ್ರದಲ್ಲಿ ಇದು ಅಮೂಲ್ಯ ಕೊಡುಗೆ ಎಂಬುದಾಗಿ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್ ಅವರು ತಿಳಿಸಿದ್ದಾರೆ.
ಈ ಸಾಧನೆಗಾಗಿ ಕಾಲೇಜಿನ ಅಧ್ಯಕ್ಷರಾದ ಡಾ. ಯಶವಂತ್ ಭೂಪಾಲ್, ನಿರ್ದೇಶಕರಾದ ವೈ.ಜೆ. ಪೃಥ್ವಿರಾಜ್ ಭೂಪಾಲ್, ಇಸಿಇ ವಿಭಾಗದ ಮುಖ್ಯಸ್ಥ ಡಾ. ಸದ್ಯೋಜಾತ ಕೆ.ಎಂ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಡಾ. ಜವಳಕರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.