
ಸುಳ್ಯ ೬೦ ರ ಸಂಭ್ರಮಾಚರಣೆ | ಸುಳ್ಯ `ಅಂದು-ಇಂದು- ಮುಂದು’ ವಿಚಾರ ಸಂಕಿರಣ
ಸುಳ್ಯ:ಸುಳ್ಯದಲ್ಲಿರುವ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸುಳ್ಯ ತಾಲೂಕು ರಚನೆಯಾಗಿ ೬೦ ವರ್ಷ ಕಳೆದರೂ ತಾಲೂಕು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ.
ಸುಳ್ಯ ತಾಲೂಕು ರಚನೆಯಾಗಿ ೬೦ ವರ್ಷ ತುಂಬಿರುವ ಹಿನ್ನಲೆಯಲ್ಲಿ ತಾಲೂಕು ೬೦ರ ಸಂಭ್ರಮ ಆಚರಣಾ ಸಮಿತಿಯ ವತಿಯಿಂದ ಜಾನಕಿ ವೆಂಕಟ್ರಮಣ ಗೌಡ ಸಭಾಭವನ ಅಮರಶ್ರೀಭಾಗ್‌ನಲ್ಲಿ ಬುಧವಾರ ನಡೆದ ಸುಳ್ಯ ೬೦ ಸಂಭ್ರಮಾಚರಣೆಯ ಅಂಗವಾಗಿ ಏರ್ಪಡಿಸಿದ ಸುಳ್ಯ ಅಂದು ,ಇಂದು, ಮುಂದು ಎಂಬ ವಿಚಾರ ಸಂಕಿರಣದಲ್ಲಿ ಸುಳ್ಯ ಇಂದು ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.
ಸುಳ್ಯ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದರೂ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಂಡಿಲ್ಲ. ೧೯೯೧ರಲ್ಲಿ ಡಿಪಿಆರ್ ಆದ ೧೧೦ ಕೆವಿ ವಿದ್ಯುತ್ ಸಬ್ ಸ್ಟೇಷನ್ ಇನ್ನೂ ಆಗಿಲ್ಲ, ತಾಲೂಕಿಗೆ ಒಂದು ಸುಸಜ್ಜಿತ ಪುರಭವನ, ಅಂಬೇಡ್ಕರ್ ಭವನ, ರಂಗಮಂದಿರ, ಕ್ರೀಡಾಂಗಣ ಇನ್ನೂ ಮರೀಚಿಕೆಯಾಗಿದೆ, ಕೃಷಿ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿ ಆಗಿಲ್ಲ. ಇಲ್ಲಿನ ಶೈಕ್ಷಣಿಕ ಕ್ರಾಂತಿಯಿಂದ ಮಾತ್ರ ಸುಳ್ಯ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆದಿದೆ ಎಂದು ಹೇಳಿದರು.
ಸುಳ್ಯ ಅಂದು ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ರಾಜಕೀಯ ಐಕ್ಯತೆ, ದೂರದೃಷ್ಠಿಯಿಂದ ತಾಲೂಕು ರಚನೆ ಸಾಧ್ಯವಾಯಿತು. ಶೈಕ್ಷಣಿಕ ಬೆಳವಣಿಗೆ ನಡೆದಂತೆ ಇಲ್ಲಿ ಸಂಪರ್ಕ ಬೆಳವಣಿಗೆ ಸಾಧ್ಯವಾಗಿದೆ. ಹಲವಾರು ರಾಜಕೀಯ ಏಳು ಬೀಳುಗಳು ಕಂಡಿದೆ ಎಂದರು.
ಸುಳ್ಯ ಮುಂದು ಎಂಬ ವಿಷಯದಲ್ಲಿ ವಿಚಾರ ಮಂಡಿಸಿದ ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಅಡಿಕೆ ಕೃಷಿ ನಾಶವಾದ ಹಿನ್ನಲೆಯಲ್ಲಿ ಬಹುಬೆಳೆ ಪದ್ಧತಿಗೆ ರೈತರು ಆದ್ಯತೆ ನೀಡಬೇಕು, ಸರಕಾರ ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಕೃಷಿ ನಾಶವಾದ ರೈತರ ಸಾಲ ಮನ್ನಾ ಮಾಡಬೇಕು, ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು. ಸುಳ್ಯದ ೧೧೦ ಕೆವಿ ಸಬ್ ಸ್ಟೇಷನ್ ಕಾಮಗಾರಿ ಪೂರ್ತಿಯಾಗಬೇಕು. ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ, ಪುತ್ತೂರು-ಸುಳ್ಯ-ಕುಶಾಲನಗರ ರೈಲು ಮಾರ್ಗ ನಿರ್ಮಾಣ ಮಾಡಬೇಕು, ವಿದ್ಯುತ್, ನೀರು ರಸ್ತೆ, ಸೇರಿ ಮೂಲಭೂತ ಅಭಿವೃದ್ಧಿಯ ಜೊತೆಗೆ ಕೈಗಾರಿಕಾ ಪಾರ್ಕ್, ಕ್ರೀಡಾ ಸಂಕೀರ್ಣ, ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು. ಶಾಸಕಿ ಭಾಗೀರಥಿ ಮುರುಳ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.




























