ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.07-ನಗರದ ಛಾಯಾಗ್ರಾಹಕ ಎಸ್. ಚರಣ್ ಬಿಳಿಗಿರಿ ಅವರಿಗೆ ರಾಜ್ಯಮಟ್ಟದ ಛಾಯಾಗ್ರಾಹಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಲಭಿಸಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಮೈಸೂರು ಪತ್ರಿಕಾ ಛಾಯಾಗ್ರಾಹಕರ ಸಂಘದ ವತಿಯಿಂದ ರಾಜ್ಯ ಮಟ್ಟದ ಸುದ್ದಿ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪತ್ರಿಕಾ ಛಾಯಾಗ್ರಹಕರು ತಮ್ಮ ಸುದ್ದಿ ಛಾಯಾಚಿತ್ರಗಳನ್ನು ಕಳುಹಿಸಿದ್ದರು. ಹಿರಿಯ ಛಾಯಾಗ್ರಾಹಕ ದಿವಂಗತ ನೇತ್ರರಾಜು ಸ್ಮರಣಾರ್ಥ ಅತ್ಯುತ್ತಮ ಛಾಯಾಚಿತ್ರಕ್ಕೆ ಬಹುಮಾನವನ್ನು ಸಹ ಘೋಷಿಸಲಾಗಿತ್ತು.
ಈ ಎಲ್ಲಾ ಸ್ಪರ್ಧೆಯ ತೀರ್ಪುಗಾರರಾಗಿ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಹಿರಿಯ ಛಾಯಾಗ್ರಹಕ ಎಸ್. ತಿಪ್ಪೇಸ್ವಾಮಿ ಹಾಗೂ ಹಲೋ ಮೈಸೂರು ಪತ್ರಿಕೆಯ ಸಂಪಾದಕ ಟಿ.ಜಿ. ಗುರುರಾಜ್ ಕಾರ್ಯನಿರ್ವಹಿಸಿ ಅತ್ಯುತ್ತಮ ಛಾಯಾಚಿತ್ರಗಳನ್ನು ಆಯ್ಕೆ ಮಾಡಿ ತಮ್ಮ ತೀರ್ಪನ್ನು ನೀಡಿರುತ್ತಾರೆ.
ಈ ರಾಜ್ಯ ಮಟ್ಟದ ಛಾಯಾಗ್ರಾಹಕ ಸ್ಪರ್ಧೆಯಲ್ಲಿ ಚಾಮರಾಜನಗರದ ಎಸ್. ಚರಣ್ ಬಿಳಿಗಿರಿ ಸಮಾಧಾನಕರ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರನ್ನು ಚಾಮರಾಜನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಚಾಮರಾಜನಗರ ಜಿಲ್ಲೆಯ ಎಲ್ಲಾ ಛಾಯಾಗ್ರಹಕ ಸಂಘಗಳು, ವಿವಿಧ ಸಂಘ, ಸಂಸ್ಥೆಗಳು ಅಭಿನಂದಿಸುತ್ತಿದ್ದಾರೆ.


























