ಸಂಜೆವಾಣಿ ವಾರ್ತೆ
ತಿ.ನರಸೀಪುರ ಆ.20- ಅಸಂಘಟಿತ ಕಾರ್ಮಿಕರ ವಲಯದಲ್ಲಿರುವ ಛಾಯಾಗ್ರಾಹಕರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾರ್ಮಿಕ ಅಧಿಕಾರಿ ಎಂ. ಸದಾನಂದ ಸಲಹೆ ನೀಡಿದರು.
ಪಟ್ಟಣದ ಮಹಾವೀರ್ ಭವನದಲ್ಲಿ ಮಂಗಳವಾರ ತಾಲೂಕು ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ. ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿತ್ಯವೂ ದುಡಿಮೆಯ ಮೂಲಕ ಬದುಕನ್ನು ನಡೆಸುತ್ತಿರುವ ಛಾಯಾಗ್ರಾಹಕರು ಕೂಡ ಅಸಂಘಟಿತ ಕಾರ್ಮಿಕರು ಆಗಿರುವುದರಿಂದ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ಎಸ್.ಕೆ.ಶಿವಕುಮಾರ್ ಮಾತನಾಡಿ, ಯಾವುದೇ ಒಂದು ದೃಶ್ಯವನ್ನು ಚಿತ್ರದಲ್ಲೂ ಅಥವಾ ವಿಡಿಯೋ ತುಣುಕುಗಳಲ್ಲಿ ಸೆರೆ ಹಿಡಿದಿಡುವ ವಿಶ್ವದ ಛಾಯಾಗ್ರಹಣಕ್ಕೆ 186 ವರ್ಷಗಳ ಇತಿಹಾಸವಿದೆ. ಜಾಗತೀಕರಣದಲ್ಲಿ ತಾಂತ್ರಿಕತೆ ಬೆಳವಣಿಗೆ ಆಗಿದ್ದರಿಂದ ಪ್ರತಿಯೊಬ್ಬರ ಕೈಯಲ್ಲೂ ಛಾಯಾಗ್ರಹಣದ ಸಾಧನ ಇದೆ. ತಾಲೂಕಿನಲ್ಲಿ ಛಾಯಾಗ್ರಾಹಕ ಸಂಘವನ್ನು ಕಟ್ಟಿಕೊಂಡು ಛಾಯಾಗ್ರಾಹಕರಿಗೆ ನೆರವು ನೀಡುವುದು ಮತ್ತು ವಾರ್ಷಿಕ ಸಭೆ ಸಮಾರಂಭಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರಾದ ನಿವೃತ್ತ ದೈಹಿಕ ಶಿಕ್ಷಕ ಆರ್.ಎಸ್.ಬಸವರಾಜು, ರೂಪಶ್ರೀ ವೆಂಕಟೇಶ್ ಹಾಗೂ ಸಿ.ಎಸ್.ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಆರ್. ಶಾಂತಕುಮಾರ್, ಉಪಾಧ್ಯಕ್ಷ ಎಂ.ಎಸ್. ಪ್ರಕಾಶ್, ಖಜಾಂಚಿ ನಂಜುಂಡ ಆರಾಧ್ಯ, ಆರ್ ಪಿ ಶಿವಕುಮಾರ್, ರಘುನಂದನ್ ಸೇರಿದಂತೆ ಪಟ್ಟಣ ಹಾಗೂ ತಾಲೂಕಿನ ಛಾಯಾಗ್ರಾಹಕರು ಇದ್ದರು.


























