
ನವದೆಹಲಿ,ಜ.೩-ಹರಿಯಾಣದ ಪ್ರಮುಖ ವಿರೋಧ ಪಕ್ಷವಾದ ಭಾರತೀಯ ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಅಧ್ಯಕ್ಷ ಅಭಯ್ ಸಿಂಗ್ ಚೌತಾಲ ಅವರ ಹೇಳಿಕೆಯಿಂದಾಗಿ ಹೊಸ ವಿವಾದವೊಂದು ಹುಟ್ಟಿಕೊಂಡಿದೆ.
ಹರಿಯಾಣದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಭಯ್ ಸಿಂಗ್ ಚೌತಾಲ,ನೆರೆಯ ದೇಶಗಳಲ್ಲಿನ ಹಿಂಸಾಚಾರವನ್ನು ಉಲ್ಲೇಖಿಸಿ, “ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಲ್ಲಿ ನಡೆದಂತೆ ಇಲ್ಲಿಯೂ ಇದೇ ರೀತಿಯ ಚಳುವಳಿಯನ್ನು ನಡೆಸಬೇಕಾಗುತ್ತದೆ. ಆಡಳಿತಗಾರರನ್ನು ಅವರ ಸಿಂಹಾಸನಗಳಿಂದ ಎಳೆದು ಬೀದಿಗಳಲ್ಲಿ ಓಡಿಸಿ ಹೊಡೆಯಬೇಕಾಗುತ್ತದೆ. ಅವರನ್ನು ದೇಶ ಬಿಡುವಂತೆ ಒತ್ತಾಯಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳದಂತೆ ಭಾರತದಲ್ಲಿಯೂ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಆಂದೋಲನ ನಡೆಯಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಈಗ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಹರಿಯಾಣದಲ್ಲಿ ಚೌತಾಲ ಅವರ ಕಾರ್ಯಕ್ರಮದ ವೀಡಿಯೊ ವೈರಲ್ ಆಗುತ್ತಿದ್ದು,
“ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಯುವಕರು ಸರ್ಕಾರವನ್ನು ದೇಶ ಬಿಡುವಂತೆ ಒತ್ತಾಯಿಸಿದ್ದಾರೆ. ನೇಪಾಳದ ಯುವಕರು ಸಹ ಅದೇ ಮಾರ್ಗವನ್ನು ಅನುಸರಿಸಿ ಸರ್ಕಾರವನ್ನು ಉರುಳಿಸಿದ್ದಾರೆ. ಭಾರತದಲ್ಲಿಯೂ ಇದೇ ರೀತಿಯ ತಂತ್ರವನ್ನು ಜಾರಿಗೆ ತಂದು ಪ್ರಸ್ತುತ ಸರ್ಕಾರವನ್ನು ಉರುಳಿಸುವ ಅವಶ್ಯಕತೆಯಿದೆ” ಎಂದು ಅಭಯ್ ಸಿಂಗ್ ಚೌಟಾಲಾ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್ ಪೂನವಾಲ್ಲಾ ಅವರು ಚೌತಲಾ ಅವರ ಹೇಳಿಕೆಯನ್ನು ವಿರೋಧಿಸಿ, ಈ ಹೇಳಿಕೆ ಭಾರತದ ಸಾಂವಿಧಾನಿಕ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮಾನದಂಡಗಳಿಗೆ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.ಈ ಹೇಳಿಕೆಯು ವಿರೋಧ ಪಕ್ಷದ ಸಾಂವಿಧಾನಿಕ ವಿರೋಧಿ, ಭಾರತ ವಿರೋಧಿ ಪ್ರವೃತ್ತಿಯನ್ನು ತೋರಿಸುತ್ತದೆ ಎಂದು ಪೂನವಾಲ್ಲಾ ಟೀಕಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಲು ವಿರೋಧ ಪಕ್ಷದ ನಾಯಕರು ಸಂವಿಧಾನ ವಿರೋಧಿ, ಭಾರತ ವಿರೋಧಿ ಮನಸ್ಥಿತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ . ಇದು ಅಂಬೇಡ್ಕರ್ ಅವರ ಸಂವಿಧಾನದ ವಿರುದ್ಧದ ಕೃತ್ಯವಾಗಿದೆ. ಕೆಲವರು ರಾಷ್ಟ್ರೀಯ ಹಿತಾಸಕ್ತಿಗಿಂತ ತಮ್ಮ ಸ್ವಂತ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದ್ದಾರೆ” ಎಂದು ಶಹಜಾದ್ ಪೂನವಾಲ್ಲಾ ಅವರು ಎಕ್ಸ್ ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ವಿರೋಧ ಪಕ್ಷದ ನಾಯಕರನ್ನು ಟೀಕಿಸಿದ್ದಾರೆ. ಹರಿಯಾಣ ಕ್ಯಾಬಿನೆಟ್ ಸಚಿವೆ ಕೃಷ್ಣ ಬೇಡಿ ಕೂಡ ಚೌತಾಲ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಚೌತಾಲ ಅವರ ಕುಟುಂಬದ ರಾಜಕೀಯ ಇತಿಹಾಸವನ್ನು ಉಲ್ಲೇಖಿಸಿದ ಬೇಡಿ, ಅವರ ಇತ್ತೀಚಿನ ಹೇಳಿಕೆಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಹೇಳಿದರು.






















