
ತೊಡಿಕಾನದ ಮೀನಾಕ್ಷಿ ಪ್ರಥಮ – ಎಣ್ಮೂರಿನ ಶಿವರಾಮ ಚಾಮೆತಡ್ಕ ದ್ವಿತೀಯ
ಸುಳ್ಯ:ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಮತ್ತು ಇನ್ನಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಹಾಲು ಕರೆಯುವ ಸ್ಪರ್ಧೆ ಚೊಕ್ಕಾಡಿಯ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾ ಕೇಂದ್ರದ ಆವರಣದಲ್ಲಿ ನಡೆಯಿತು.
ಸಮಾರಂಭವನ್ನು ಶಾಸಕಿ ಭಾಗಿರಥಿ ಮುರುಳ್ಯ ಉದ್ಘಾಟಿಸಿ ಮತನಾಡಿ ಹೈನುಗಾರಿಕೆ ಕೃಷಿಯ ಒಂದು ಭಾಗವಾಗಿದ್ದು, ಲಾಭದಾಯಕ ಉದ್ಯಮವಾಗಿದೆ. ಈ ಮೂಲಕ ಹಲವು ಕುಟುಂಬಗಳು ಆರ್ಥಿಕವಾಗಿ ಸಡೃಡವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಕನಿಷ್ಠ ವೇತನ ನಿಗದಿ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್, ಅರೆ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ ಅರುಣ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಮಂಜುಳಾ ಎಂ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಭಗವಾನ್ ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಕಾಂಚೋಡು, ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ ಮುಸ್ತಾಫಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಲ್ಯಾಂಪ್ ಸೊಸೈಟಿಯ ಅಧ್ಯಕ್ಷೆ ನೀಲಮ್ಮ ಕಣಪಿಲ, ಸಿ.ಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ , ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಕಳಂಜ ಪಶು ಆಸ್ಪತ್ರೆಯ ವೈದ್ಯಾದಿಇಕಾರಿ ಡಾ. ಮೇಘಶ್ರೀ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕೆಎಂಎಫ್ ಅಧಿಕಾರಿ ಮತ್ತು ಸಿಬ್ಬಂದಿಗಳು, ಹೈನುಗಾರರು ಭಾಗವಹಿಸಿದರು.
ಫಲಿತಾಂಶ :
ಹಾಲು ಕರೆಯುವ ಸ್ಪರ್ಧೆಯಲ್ಲಿ ತೊಡಿಕಾನ ಗ್ರಾಮದ ಮೀನಾಕ್ಷಿ ಅವರ ಹಸುವಿನಲ್ಲಿ ೨೯.೯೩ ಲೀಟರ್ ಹಾಲನ್ನು ಕರೆದು ಉತ್ಪಾದಿಸಿ ಪ್ರಥಮ ಸ್ಥಾನ ಗಳಿಸಿ ೨ ಗ್ರಾಂ ಚಿನ್ನದ ನಾಣ್ಯವನ್ನು ತನ್ನದಾಗಿಸಿಕೊಂಡರು. ಎಣ್ಮೂರು ಗ್ರಾಮದ ಶಿವರಾಮ ಚಾಮೆತಡ್ಕ ಅವರ ದನವು ೨೮.೧೪ ಲೀಟರ್ ಹಾಲನ್ನು ಉತ್ಪಾದಿಸಿ ದ್ವಿತೀಯ ಸ್ಥಾನ ಗಳಿಸಿ ೧ ಗ್ರಾಂ ಚಿನ್ನದ ನಾಣ್ಯವನ್ನು ಗಳಿಸಿಕೊಂಡಿದೆ. ಸುಳ್ಯ ಕಸಬಾ ದುಗಲಡ್ಕದ ಹೇಮಾವತಿ ಅವರ ಹಸು ೨೦.೦೪ ಲೀಟರ್ ಹಾಲನ್ನು ಉತ್ಪಾದಿಸಿ ತೃತೀಯ ಸ್ಥಾನ ದೊಂದಿಗೆ ೦.೫ ಗ್ರಾಂ ಚಿನ್ನದ ನಾಣ್ಯ ಗಳಿಸಿಕೊಂಡಿದೆ. ಇನ್ನುಳಿದ ಏಳು ದನಗಳು ಸಮಾಧಾನಕರ ಬಹುಮಾನವಾಗಿ ಬೆಳ್ಳಿಯ ನಾಣ್ಯಗಳನ್ನು ಗಳಿಸಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನ ನಡೆಯಿತು. ವಿವಿಧ ವಯೋಮಾನದ ಹೆಚ್‌ಎಫ್ ಜರ್ಸಿ ಮತ್ತು ದೇಸಿ ತಳಿಯ ಒಟ್ಟು ೫೨ ಹೆಣ್ಣು ಕರುಗಳು ಪ್ರದರ್ಶನದಲ್ಲಿ ಭಾಗವಹಿಸಿತು. ಇದರಲ್ಲಿ ಒಟ್ಟು ೨೭ ಕರುಗಳು ಬೆಳ್ಳಿಯ ನಾಣ್ಯಗಳನ್ನು ಹಾಗೂ ಆಕರ್ಷಕ ಬಹುಮಾನಗಳನ್ನು ಗೆದ್ದುಕೊಂಡವು.




























