Home ಜಿಲ್ಲೆ ಮಂಗಳೂರು ಚೆಕ್ ಅಮಾನ್ಯ ಪ್ರಕರಣ – ದ್ವಿಗುಣ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

ಚೆಕ್ ಅಮಾನ್ಯ ಪ್ರಕರಣ – ದ್ವಿಗುಣ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ

ಸುಳ್ಯ:ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ದ್ವಿಗುಣ ಮೊತ್ತದ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಮಂಗಳೂರು ಕೋಣಾಜೆ ಪರಿಸರದ ಪುಳಿಂಚಿತ್ತಾಡಿ ಎಂಬಲ್ಲಿಯ ಪೂಜಾ ಶೆಟ್ಟಿ ಇವರು ೨೦೧೯ನೇ ಇಸವಿಯಲ್ಲಿ ಸುಳ್ಯದ ಅಜ್ಜಾವರದ ಕರ್ಣಿಕ ಮನೆಯ ರಾಮ್‌ಪ್ರಸಾದ್ ಎ.ಕೆ ಇವರಿಂದ ಪಡೆದ ರೂ. ೨,೫೦,೦೦೦ ಸಾಲದ ಮೊಬಲಗನ್ನ್ಗು ಕೋಣಾಜೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಸಂಬಂಧಿಸಿದ ಚೆಕ್ಕಿನ ಮೂಲಕ ದಿನಾಂಕ ೧೦-೧೦-೨೦೧೯ ರಂದು ಮರು ಪಾವತಿ ಮಾಡಿದ್ದರು. ಈ ಚೆಕ್ ಅಮಾನ್ಯಗೊಂಡ ಹಿನ್ನಲೆಯಲ್ಲಿ ಸುಳ್ಯ ನ್ಯಾಯಾಲಯದಲ್ಲಿ ಫಿರ್ಯಾದುದಾರರಾದ ಅಜ್ಜಾವರ ರಾಮ್‌ಪ್ರಸಾದ್ ಎ.ಕೆ. ಅವರು ಸಾಲ ಮರು ಪಾವತಿಗೆ ನೀಡಿದ ಚೆಕ್ ಅಮಾನ್ಯಗೊಂಡ ಬಗ್ಗೆ ಕ್ರಿಮಿನಲ್ ಪ್ರಕರಣವನ್ನು ೨೦೨೦ನೇ ಜನವರಿ ತಿಂಗಳಲ್ಲಿ ದಾಖಲಿಸಿದ್ದರು. ಸುಳ್ಯದ ಪ್ರಧಾನ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಕೇಸಿನ ವಿಚಾರಣೆ ನಡೆಸಿ, ಆರೋಪಿ ಪೂಜಾ ಶೆಟ್ಟಿ ಮೇಲೆ ದಾಖಲಿಸಿದ ಚೆಕ್ ಅಮಾನ್ಯ ಪ್ರಕರಣವು ಸಾಬೀತಾಗಿದೆ.
ಅದರಂತೆ ನ್ಯಾಯಾಲಯವು ಆರೋಪಿಗೆ ರೂ. ೫,೦೦,೦೦೦ ಮೊಬಲಗನ್ನು ದಂಡವಾಗಿ ವಿಧಿಸಿ, ದಂಡದ ಮೊತ್ತ ಪಾವತಿಸಲು ವಿಫಲರಾದಲ್ಲಿ ಒಂದು ವರ್ಷ ಸಾದ ಸೆರೆಮನೆ ವಾಸ ಅನುಭವಿಸುವಂತೆ ಆದೇಶ ಮಾಡಲಾಗಿದೆ. ಪಾವತಿಸಿದ ದಂಡದ ಮೊತ್ತದಲ್ಲಿ ಫಿರ್ಯಾದುದಾರರಿಗೆ ರೂ. ೪,೯೦,೦೦೦ ಮೊತ್ತವನ್ನು ಪರಿಹಾರವಾಗಿ ಹಾಗೂ ರೂ. ೧೦,೦೦೦ ಮೊಬಲಗನ್ನು ಸರಕಾರದ ಖರ್ಚಿನ ಬಾಬ್ತು ಪಾವತಿಸುವಂತೆ ನ್ಯಾಯಾಲಯ ತೀರ್ಪು ನೀಡಿ ಆದೇಶ ಮಾಡಿದೆ. ಫಿರ್ಯಾದುದಾರರ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಪಿ. ಭಾಸ್ಕರ ರಾವ್ ಹಾಗೂ ವನಿತಾ ಎನ್. ಜೆ. ವಾದಿಸಿದ್ದರು.