
ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ.12- ಗುಂಡ್ಲುಪೇಟೆ ತಾಲೂಕಿನಲ್ಲಿರುವ ಚೆಂಡು ಹೂವು ಫ್ಯಾಕ್ಟರಿಯಿಂದ ರೈತರು ಹಾಗೂ ಜಮೀನುಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯಿಸಿ, ನಗರದಲ್ಲಿ ರೈತ ಸಂಘದಿಂದ ಬ್ಯಾಕ್ ರ್ಯಾಲಿ ನಡೆಯಿತು.
ಗುಂಡ್ಲುಪೇಟೆ ತಾಲೂಕಿನ ಸಿಂಡನಪುರದ ಹತ್ತಿರದಲ್ಲಿರುವ ಚೆಂಡು ಹೂ ಫ್ಯಾಕ್ಟರಿ ಬಳಿ ರೈತ ಸಂಘಟನೆಗಳು ಮುಖಂಡರು ಸಮಾವೇಶಗೊಂಡು ಫ್ಯಾಕ್ಟರಿಯನ್ನು ಪರಿಶೀಲನೆ ಮಾಡಿದ ನಂತರ ಅಲ್ಲಿಂದಲೇ ಸಂಘಟನೆಗೊಂಡು ಬೈಕ್ ರ್ಯಾಲಿ ಮೂಲಕ ಮಧ್ಯಾಹ್ನ 2 ಗಂಟೆಗೆ ಜಿಲ್ಲಾಡಳಿತ ಭವನ ತಲುಪಿದರು. ಮಾರ್ಗ ಮಧ್ಯೆದಲ್ಲಿರುವ ಅರಣ್ಯ ಇಲಾಖೆ ಕಚೇರಿ, ಸೆಸ್ಕಾಂ ಕಚೇರಿಯ ಬಳಿಕ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಅಲ್ಲಿಂದಬಿ. ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸಿಂಡನಪುರದ ಹತ್ತಿರದಲ್ಲಿ ನಿರ್ಮಾಣವಾಗಿರುವ ಚೆಂಡು ಮಲ್ಲಿಗೆ ಕಾರ್ಖಾನೆ ರೈತರ ವಿರೋಧಿಯಾಗಿದ್ದು. ಈ ಪ್ರದೇಶ ಸುತ್ತಲು ದುರ್ವಾಸನೆ ಬೀರುತ್ತದೆ. ಜೊತೆಗೆ ಚೆಂಡು ಹೂವು ಸಂಸ್ಕರಣೆ ಮಾಡುವ ಕೊಳಚೆ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಇತರೆ ಫಸಲು ಬರುತ್ತಿಲ್ಲ ಎಂದು ದೂರಿದರು.
ಸಾಮೂಹಿಕ ನೇತೃತ್ವದ ರೈತ ಸಂಘ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸಿಂಡನಪುರದಲ್ಲಿ ಆರಂಭವಾಗಿರುವ ಚೆಂಡು ಮಲ್ಲಿಗೆ ಹೂ ಪ್ಯಾಕ್ಟರಿ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮಾರಕವಾಗಿದೆ. ಪ್ಯಾಕ್ಟರಿಯಲ್ಲಿ ಸಂಸ್ಕರಿಸುವ ಹೂವು ದುರ್ವಾಸನೆಯನ್ನು ಬೀರುತ್ತದೆ. ಅಲ್ಲದೇ ಈ ನೀರನ್ನು ಅಲ್ಲೆ ಶೇಖರಣೆ ಮಾಡುವುದಿದಿಂದ ಅಕ್ಕಪಕ್ಕದ ಜಮೀನುಗಳ ರೈತರು ಬೋರ್ ವೇಲ್ ಕೊರೆಸಿದರೆ, ಕಲುಷಿತ ನೀರು ಬೋರ್‍ವೆಲ್‍ನಲ್ಲು ಬರುತ್ತಿದೆ. ಇದು ಕೃಷಿ ಯೋಗ್ಯವಲ್ಲ ಎಂದು ಈಗಾಗಲೇ ಪರಿಸರ ಮಾಲಿನ್ಯ ಅಧಿಕಾರಿಗಳು ವರದಿಯನ್ನು ನೀಡಿದ್ದಾರೆ. ಇಷ್ಟಾದರು ಸಹ ಈ ಫ್ಯಾಕ್ಟರಿ ಕಾರ್ಯಾರಂಭ ಮಾಡುತ್ತಿದೆ. ಇದರಿಂದ ಜನ ಜಾನುವಾರುಗಳು ಅನಾರೋಗ್ಯಕ್ಕೀಡಾಗುತ್ತಿದೆ. ಇದನ್ನು ಕೂಡಲೇ ಜಿಲ್ಲಾಡಳಿತ ಬಂದ್ ಮಾಡಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಜವರೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು. ಅಲ್ಲದೆ ಇತರೇ ಇಲಾಖೆಗಳಿಗೆ ಸಂಬಂಧ ರೈತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಹೊನ್ನೂರು ಪ್ರಕಾಶ, ರೈತ ಮುಖಂಡರಾದ ಮಾಡ್ರಹಳ್ಳಿ ಪಾಪಣ್ಣ, ಬರಗಿ ಮಹೇಶ್, ಬೆಟ್ಟದಮಾದಹಳ್ಳಿ ಷಣ್ಮುಖ, ಬೇರಂಬಾಡಿ ಶಶಿ, ಹೊನ್ನೆಗೌಡನಹಳ್ಳಿ ಗುರು, ಸಿಂಡನಪುರ ಹಾಗು ಕೆಲಸೂರುಪುರ ಭಾಗದ ರೈತರು ಭಾಗವಹಿಸಿದ್ದರು.


























