ಚಿರತೆ ದಾಳಿಗೆ ಸಾಕುನಾಯಿ ಬಲಿ

ಗುಂಡ್ಲುಪೇಟೆ: ಜ.18:- ಇತ್ತೀಚಿನ ದಿನಗಳಲ್ಲಿ ತಾಲೂಕಿನಲ್ಲಿ ಚಿರತೆ ಉಪಟಳ ದಿನೇ ದಿನೆ ಹೆಚ್ಚುತ್ತಿದ್ದು, ರೈತರು ಜಮೀನಿಗೆ ತೆರಳಲು, ಜಮೀನಿನಲ್ಲಿರಲು ದಿಗಿಲುಗೊಳ್ಳುವಂತಾಗಿದೆ. ಈ ಮಧ್ಯೆ ಸಾಕುನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ಗುರುವಾರ ತಡರಾತ್ರಿ ತಾಲೂಕಿನ ಚೆನ್ನಮಲ್ಲಿಪುರದಲ್ಲಿ ನಡೆದಿದೆ.


ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದ ಸುಬ್ಬಪ್ಪ ಎಂಬುವವರ ಜಮೀನಿನಲ್ಲಿ ಚಿರತೆ ಸಾಕುನಾಯಿಯನ್ನು ಗುರುವಾರ ತಡರಾತ್ರಿ ಬೇಟೆಯಾಡಿದ್ದು, ಈ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಹೊಂಚು ಹಾಕಿ ಕಳ್ಳ ಹೆಜ್ಜೆ ಇಟ್ಟು ಬಂದ ಚಿರತೆ ಹಸುವಿನ ಮೇಲೆ ಕಣ್ಣಿಟ್ಟಿದೆ. ಕೂಡಲೇ ಎಚ್ಚೆತ್ತ ಹಸು ಹಾಗೂ ಸಾಕುನಾಯಿ ಪ್ರತಿರೋಧ ತೋರಿದ ಬೆನ್ನಲ್ಲೇ ನಾಯಿಯನ್ನು ಅಟ್ಟಾಡಿಸಿ ಕ್ಷಣಮಾತ್ರದಲ್ಲಿ ನಾಯಿಯನ್ನು ಕೊಂದು ಹೊತ್ತೊಯ್ದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಅರಣ್ಯಾಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ ಸೆರೆಗೆ ಕ್ರಮ ವಹಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಈ ಕುರಿತು ರೈತ ಸುಬ್ಬಪ್ಪ ಅವರ ಮಗ ಬಸವರಾಜು ಪ್ರತಿಕ್ರಿಯಿಸಿ, ಚಿರತೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನಾಯಿ ಚೀರಾಟದಿಂದ ಎಚ್ಚೆತ್ತು ನೋಡುವಷ್ಟರಲ್ಲಿ ನಾಯಿಯನ್ನು ಹೊತ್ತೊಯ್ದಿತ್ತು. ಅರಣ್ಯಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ, ಚಿರತೆ ಸೆರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಜಮೀನಿನಲ್ಲಿರಲು ಆತಂಕದ ಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.


ಪರಮಾಪುರ-ಕಬ್ಬಹಳ್ಳಿ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ:
ನಡುರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡು ವಾಹನ ಸವಾರರು ಆತಂಕಗೊಂಡ ಘಟನೆ ತಾಲೂಕಿನ ಪರಮಾಪುರ ಸಮೀಪ ಶುಕ್ರವಾರ ರಾತ್ರಿ ನಡೆದಿದೆ.
ಪರಮಾಪುರದಿಂದ ಕಬ್ಬಹಳ್ಳಿ ಕಡೆಗೆ ಬಸ್ ತೆರಳುವಾಗ ಪೆÇದೆಯಿಂದ ಹೊರಬಂದ ಚಿರತೆ ಯಾವುದೇ ಅಂಜಿಕೆ ಇಲ್ಲದೇ ರಸ್ತೆದಾಟಿದ್ದು, ಚಿರತೆ ಕಂಡ ಪ್ರಯಾಣಿಕರು ಆತಂಕಗೊಂಡಿದ್ದರು. ದಿಢೀರ್ ಚಿರತೆ ಪ್ರತ್ಯಕ್ಷವಾದ ಹಿನ್ನಲೆ ವಾಹನ ಸವಾರರು ಭಯಭೀತರಾಗಿದ್ದಾರೆ.
ರಸ್ತೆಯಲ್ಲೇ ಚಿರತೆ ಓಡಾಡುತ್ತಿದ್ದು, ವಾಹನ ಸವಾರರು, ರೈತರು ಆತಂಕಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತ ಮುಖಂಡ ಕಬ್ಬಹಳ್ಳಿ ಬಸಪ್ಪ ಮಧು ಒತ್ತಾಯಿಸಿದ್ದಾರೆ.