ಚಾಲಕರು ವಾಹನ ಚಾಲನೆ ವೇಳೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.19:-
ಚಾಲಕರು ತಮ್ಮ ಕರ್ತವ್ಯ ಪಾಲನೆಗೆ ನೀಡುವಷ್ಟೇ ಆದ್ಯತೆಯನ್ನು ಸುರಕ್ಷಿತವಾಗಿ ಮನೆಗೆ ಹಿಂತಿರುಗಲು ನೀಡಬೇಕು. ವಾಹನ ಚಾಲನೆಯ ವೇಳೆ ತಮ್ಮ ಜೀವದ ಜೊತೆಗೆ ರಸ್ತೆಯಲ್ಲಿ ಸಂಚರಿಸುತ್ತಿರುವ ಇತರರ ಜೀವಗಳ ಸುರಕ್ಷತೆಯ ಬಗ್ಗೆಯೂ ಎಚ್ಚರ ವಹಿಸಬೇಕೆಂದು ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ಹಿರಿಯ ಮೋಟಾರು ವಾಹನಗಳ ನಿರೀಕ್ಷಕ ಸಿ.ಎಸ್.ಸತೀಶ್ ಮನವಿ ಮಾಡಿದರು.

ಅವರು ಪಟ್ಟಣದ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೆÇೀ ಆವರಣದಲ್ಲಿ ಆರ್.ಟಿ.ಓ ಇಲಾಖೆ ಮತ್ತು ಸಾರಿಗೆ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 37 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ತವ್ಯದ ವೇಳೆ ವಾಹನ ಚಾಲಕರು ಅನುಸರಿಸಬೇಕಾದ ಸಾರಿಗೆ ನಿಯಮಗಳನ್ನು ವಿವರಿಸಿದ ಅವರು ಬಹುತೇಕ ಚಾಲಕರಿಗೆ ನಿಯಮಗಳ ಅರಿವಿದ್ದರೂ ಅದರ ಪಾಲನೆಯಲ್ಲಿ ತೋರಿಸುವ ನಿರ್ಲಕ್ಷ್ಯವೇ ಅಪಘಾತಗಳಿಗೆ ಕಾರಣವಾಗುತ್ತಿದೆ. ದೇಶದಲ್ಲಿ ಪ್ರತಿನಿತ್ಯ 1.70 ಲಕ್ಷ ಜನ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ. ಅಪಘಾತಗಳಿಂದ ವ್ಯಕ್ತಿಗತ ಹಾನಿ ಮಾತ್ರವಲ್ಲ, ಬದಲಾಗಿ ಅವರನ್ನು ಆಧರಿಸಿರುವ ಕುಟುಂಬಗಳೂ ಬೀದಿ ಪಾಲಾಗುತ್ತವೆ. ಅಪಘಾತ ರಹಿತ ಚಾಲನೆ ಪ್ರರತಿಯೊಬ್ಬ ಚಾಲಕನ ಗುರಿಯಾಗಿರಬೇಕೆಂದು ಕಿವಿಮಾತು ಹೇಳಿದರು.

ವಾಹನಗಳಿರುವುದು ನಮ್ಮನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತಲುಪಿಸಲು ಮಾತ್ರ. ವಾಹನ ಚಾಲನೆ ಮೋಜು ಹಾಗೂ ಮನರಂಜನೆಯಲ್ಲ. ಅತಿಯಾದ ವೇಗವೇ ಅಪಘಾತಗಳಿಗೆ ಕಾರಣ ಎನ್ನುವ ಅರಿವಿದ್ದರೂ ಬಹುತೇಕ ಚಾಲಕರು ವೇಗದ ಚಾಲನೆಗೆ ಮುಂದಾಗುತ್ತಾರೆ.

ರಸ್ತೆಗಳ ಸೂಚನಾ ಫಲಕಗಳಲ್ಲಿ ಅಳವಡಿಸಿರುವ ವೇಗಮಿತಿ ನೀತಿಯನ್ನು ಪಾಲಿಸಿ. 100 ರಲ್ಲಿ ಹೋಗ್ಬೇಡಿ, 108 ರಲ್ಲಿ ಬರಬೇಡಿ. ವಾಹನ ಚಾಲನೆಯ ವೇಳೆ ನಿಗಧಿತ ಗಮ್ಯ ಸ್ಥಾನವನ್ನು ತಲುಪಲು ಅವಸರ ಬೇಡ. ವಾಹನ ಚಾಲನೆಯ ವೇಳೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಬೇಡ. ನಿಮ್ಮೊಂದಿಗೆ ನಿಮ್ಮನ್ನು ಅಶ್ರಯಿಸಿರುವ ಕುಟುಂಬವಿರುತ್ತದೆ ಎನ್ನುವ ಪ್ರಜ್ಞೆ ಪ್ರತಿಯೊಬ್ಬರಲ್ಲಿಯೂ ಜಾಗೃತವಾಗಿರಬೇಕೆಂದ ಸತೀಶ್ ಅದೃಷ್ಠ ಒಮ್ಮೆ ಮಾತ್ರ ನಮ್ಮನ್ನು ಉಳಿಸುತ್ತದೆ. ಆದರೆ ಸುರಕ್ಷತೆಯ ಚಾಲನೆ ಎಲ್ಲಾ ಸಮಯದಲ್ಲಿಯೂ ನಮ್ಮನ್ನು ಕಾಯುತ್ತದೆ. ಚಾಲನಾ ಪರವಾನಿಗೆಯಿಲ್ಲದೆ ನಿಮ್ಮ ಮಕ್ಕಳಿಗೆ ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳನ್ನು ಚಲಾಯಿಸಲು ನೀಡಬೇಡಿ.

ಬೈಕ್ ಚಾಲನೆಯ ವೆಳೆ ಹೆಲ್ಮೆಟ್ ಧರಸಿ. ಕಾರು ಚಾಲನೆಯ ವೇಳೆ ಸೀಟ್ ಬೆಲ್ಟ್ ಹಾಕಿ. ವಾಹನ ಚಲಾಯಿಸುವ ಮುನ್ನ ವಾಹನಗಳು ಸುಸ್ಥಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಸಂಚಾರ ನಿಯಮ ಪಾಲನೆಯಿಂದ ಅಪಘಾತ ರಹಿತ ಸಮಾಜವನ್ನು ನಾವು ಕಾಣಬಹುದೆಂದರು.