
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.23- ಚಾಮುಲ್‍ನಲ್ಲಿ ಮೂಲ ಬಂಡವಾಳವೇ ಇಲ್ಲದೇ ಸಾಲ ಮಾಡಿ ಐಸ್‍ಕ್ರೀಂ ಘಟಕ ನಿರ್ಮಾಣ ಹಾಗೂ ಅಲ್ಲಿನ ಭ್ರಷ್ಟಚಾರದ ವಿರುದ್ದ ಜಿಲ್ಲಾ ರೈತ ಸಂಘ ಹಾಗೂ ಇತರೇ ಸಂಘಟನೆಗಳ ಸಹಯೋಗದಲ್ಲಿ ಮೇ 27 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ರೈತರು ಹಾಗೂ ಹಾಲು ಉತ್ಪಾದಕರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಾಮುಲ್ ವಿರುದ್ದ ಮೇ 27ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ಸಮಾವೇಶಗೊಂಡು ಮೆರವಣಿಗೆಯಲ್ಲಿ ಜಿಲ್ಲಾಡಳಿತ ಭವನ ತಲುಪಿ ಧರಣಿ ನಡೆಸಲಾಗುತ್ತದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕಾಗಮಿಸಿ ನಮ್ಮ ಹಕ್ಕೊತ್ತಾಯಗಳನ್ನು ತಿಳಿದು ಬಗೆಹರಿಸಬೇಕು. ಚಾಮುಲ್ ವ್ಯವಸ್ಥಾಪಕ ನಿರ್ದೇಶಕರನ್ನು ಕರೆಸಿ, ಸಾಲ ಮಾಡಿ ಐಸ್‍ಕ್ರಿಂ ಘಟಕ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಕೊಡಿಸುವವರಿಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಚಾಮರಾಜನಗರ ಜಿಲ್ಲೆ ಅಭಿವೃದ್ದಿಗಾಗಿ ಹಾಗೂ ಹೈನುಗಾರರ ಹಿತರಕ್ಷಣೆ ಉದ್ದೇಶದಿಂದ ಮೈಸೂರಿನಿಂದ ಚಾಮುಲ್ ಘಟಕವನ್ನು ದಿ.ಎಚ್.ಎಸ್. ಮಹದೇವಪ್ರಸಾದ್ ವಿಭಜನೆ ಮಾಡಿ, ಕುದೇರು ಬಳಿ ಘಟಕ ನಿರ್ಮಾಣ ಮಾಡಿದ್ದರು. ಆದರೆ, ಅವರ ಉದ್ದೇಶ ಸಫಲವಾಗುತ್ತಿಲ್ಲ. ಚಾಮುಲ್ ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಲ್ಲದೇ ನಾವು ಬಂದಿರುವುದೇ ಹಣ ಖರ್ಚು ಮಾಡಲಿಕ್ಕೆ ಎಂಬ ರೈತ ವಿರೋಧಿ ಧೋರಣೆಯನ್ನು ಅಧಿಕಾರಿಗಳ ವರ್ಗ ಹಾಗೂ ಆಡಳಿತ ಮಂಡಲಿ ಅನುಸರಿಸುತ್ತದೆ ಎಂದು ದೂರಿದರು.
ಈ ರೈತ ವಿರೋಧಿ ದೋರಣೆ ಮತ್ತು ಈಗಾಗಲೇ ರೈತರು ಡೇರಿಗೆ ಪೊರೈಕೆ ಮಾಡುತ್ತಿರುವ ಹಾಲಿನ ಮೇಲೆಯೇ ಬ್ಯಾಂಕ್ ಸಾಲ ಪಡೆದುಕೊಂಡು ಪ್ರತಿ ತಿಂಗಲೂ ಬಡ್ಡಿ ಪಾವತಿ ಮಾಡುತ್ತಿರುವ ಚಾಮುಲ್ ಮತ್ತೇ ಸಾಲ ಮಾಡಿ ಐಸ್‍ಕ್ರಿಂ ಘಟಕ ಸ್ಥಾಪನೆಗೆ ಮುಂದಾಗಿದೆ. ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಐಸ್‍ಕ್ರಿಂ ಘಟಕ ಸ್ಥಾಪನೆ ಮಾಡುವ ಮೂಲಕ ರೈತರ ತಲೆ ಮೇಲೆ ಮತ್ತೇ 50 ಕೋಟಿ ರೂ. ಸಾಲದ ಹೊರೆ ಹೊರಿಸಲು ಮುಂದಾಗಿರುವುದು ಯಾವ ನ್ಯಾಯ. ಅಲ್ಲದೇ ಚಾಮುಲ್‍ನಲ್ಲಿ ವ್ಯಾಪಕ ಭ್ರಷ್ಟಚಾರ ನಡೆಯುತ್ತಿದ್ದು, ಗುತ್ತಿಗೆನೌಕರರ ನೇಮಕಾತಿಯಲ್ಲಿ ಭ್ರಷ್ಟಚಾರ, ರೈತರಿಂದ ಖರೀದಿಸುವ ಲೀಟರ್ ಹಾಲಿಗೆ ಒಂದು ರೂ. ಇಳಿಕೆ ಮಾಡಿ, ಅದರಲ್ಲಿ ಬಂದ 3 ಕೋಟಿ ರೂ.ಗಳಿಗೆ ಹೆಚ್ಚು ಹಣವನ್ನು ಒಕ್ಕೂಟ ಲಾಭದಲ್ಲಿದೆ ಎಂದು ಸುಳ್ಳು ಲೆಕ್ಕ ತೋರಿಸಿ, ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೋನಸ್ ಪಡೆದುಕೊಂಡಿದ್ದಾರೆ. ಇವೆಲ್ಲರನ್ನು ಪ್ರಶ್ನೆ ಮಾಡಿದರೆ, ಮತ್ತು ಮಾಹಿತಿ ಕೇಳಿದರೆ ಚಾಮುಲ್‍ನಲ್ಲಿ ಯಾವುದೇ ರೀತಿ ಸ್ಪಂದನೆ ದೊರೆಯುತ್ತಿಲ್ಲ ಎಂದು ದೂರಿದರು.
ಸಭೆಯಲ್ಲಿದ್ದ ಭಾಗವಹಿಸಿದ್ದ ರೈತ ಮುಖಂಡರು ಚಾಮುಲ್ ಅವ್ಯವಹಾರ ಹಾಗೂ ಇತರೇ ರೈತ ವಿರೋಧ ನೀತಿಗಳ ಕುರಿತು ಮಾತನಾಡಿದರು.
ಸಭೆಯಲ್ಲಿ ಗುಂಡ್ಲುಪೇಟೆಯಿಂದ ಮಾಡ್ಹಳ್ಳಿ ಪಾಪಣ್ಣ, ರೈತ ಮುಖಂಡರಾದ ಅಂಬಳೆ ಕುಮಾರಸ್ವಾಮಿ, ಕರಿಯಪ್ಪ. ಹಳ್ಳದ ಮಾದಹಳ್ಳಿ ಯೋಗಿಶ್, ಮೂಡಹಳ್ಳಿ ಸ್ವಮಿ, ಸಿದ್ದಲಿಂಗಸ್ವಾಮಿ, ವಿರೇಶ್, ಭೀಮನ ಬೀಡು ಚಂದ್ರು, ರಾಣಿ, ನಂಜನಗೂಡು ರತ್ನಮ್ಮ ಸೇರಿದಂತೆ ಜಿಲ್ಲೆಯ ರೈತ ಮುಖಂಡರು ಹಾಗೂ ಹೈನುಗಾರರರು ಭಾಗವಹಿಸಿದ್ದರು.