
ಉಡುಪಿ- ೨೦೨೧ ರ ಜೂನ್ ೨೧ ರಂದು ಕಾಪು ತಾಲೂಕು ಕೋಟಿ ಗ್ರಾಮದ ನಿವಾಸಿಯಾದ ವಾಸು ದೇವಾಡಿಗರ ಮಗನಾದ ಶರತ್ ದೇವಾಡಿಗನು ತನ್ನ ಸ್ನೇಹಿತನಾದ ಸುಕೇಶ್ ಮೆಂಡನ್ ಈತನ ಹುಟ್ಟು ಹಬ್ಬವನ್ನು ಆಚರಿಸಲು ಇತರ ೮ ಮಂದಿ ಸ್ನೇಹಿತರೊಂದಿಗೆ ಹಾಗೂ ಸುಕೇಶ್ ಮೆಂಡನ್ನೊಂದಿಗೆ ಕೋಟೆ ಗ್ರಾಮದ ಪಾಪನಾಶಿನಿ ಹೊಳೆಯ ಬದಿಯಲ್ಲಿ ರಾತ್ರಿ ಸುಮಾರು ೭.೩೦ ಕ್ಕೆ ಹೋಗಿ ಸುಕೇಶ್ ಮೆಂಡನ್ ಈತನ ಜನ್ಮ ದಿನದ ಬಗ್ಗೆ ಕೇಕ್ ಕಟ್ ಮಾಡಿ. ಮಾತನಾಡಿಕೊಂಡಿರುವಾಗ ರಾತ್ರಿ ಸುಮಾರು ೧೧.೦೦ ಗಂಟೆಯ ಸಮಯಕ್ಕೆ ಆರೋಪಿಯಾದ ಅಭಿಷೇಕ್ ಶ್ರೀಯಾನ್ ಎಂಬುವನು ಕೆ.ಎ. ೨೦ ಇ.ಎಸ್. ೯೯೪೧ ನೇ ನಂಬ್ರದ ಮೋಟಾರು ಸೈಕಲ್ನಲ್ಲಿ ಬಂದು ಮೋಟಾರು ಸೈಕಲ್ ನಿಲ್ಲಿಸಿ ಶರತ್ ದೇವಾಡಿಗನ ಬಳಿ ಕಿರಣ ಯಾರು ಎಲ್ಲಿದ್ದಾನೆ ಎಂದು ಕೇಳಿದ್ದು, “ಆಗ ಶರತ್ ದೇವಾಡಿಗನು ಕಿರಣ ಯಾರು ಎಂದು ಗೊತ್ತಿಲ್ಲ, ನಮ್ಮಲ್ಲಿ ಯಾಕೆ ಕೇಳುತ್ತಿ ಎಂದು” ಹೇಳಿದಾಗ ಆರೋಪಿಯು ಶರತ್ ದೇವಾಡಿಗನನ್ನು ಉದ್ದೇಶಿಸಿ “ಸೂಳೆ ಮಗನೇ ಬೇವರ್ಸಿ ನಿನಗೆ ಗೊತ್ತಿಲ್ಲವೇ” ಎಂದು ಅವಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಶರತ್ ದೇವಾಡಿಗನನ್ನು ಕೊಲ್ಲುವ ಉದ್ದೇಶದಿಂದ ಕೈಯಲ್ಲಿ ಹಿಡಿದುಕೊಂಡು ಬಂದಿದ್ದ ಚೂರಿಯಿಂದ ಶರತ್ ದೇವಾಡಿಗನು “ಎಡ ಬದಿಯ ಕಿಬ್ಬೊಟ್ಟೆಗೆ, ಎಡಬದಿಯ ಪಕ್ಕೆಲುಬಿಗೆ, ಎಡಕೈ ತೋಳಿಗೆ, ಎಡಕೈಯ ಮಣಿಗಂಟಿಗೆ, ಇರಿದಿದ್ದ.
ಆಗ ಶರತ್ ದೇವಾಡಿಗನು ಜೋರಾಗಿ ಬೊಬ್ಬೆ ಹೊಡೆದು ಕೆಳಗೆ ಬಿದ್ದಿದ್ದು, ಕೂಡಲೇ ಅಲ್ಲೇ ಇದ್ದ ಆತನ ಸ್ನೇಹಿತರು ಶರತ್ ದೇವಾಡಿಗನನ್ನು ಆರೋಪಿಯಿಂದ ಬಿಡಿಸಿದ್ದು ಆರೋಪಿಯು ಅಲ್ಲಿಂದ ಓಡಿ ಹೋಗುವಾಗ ಚೂರಿಯನ್ನು ಅಲ್ಲಿಯೇ ಬಿಸಾಡಿ ಶರತ್ ದೇವಾಡಿಗ ಮತ್ತು ಆತನ ಸ್ನೇಹಿತರಿಗೆ ಬೇವರ್ಸಿಗಳೆ ಇವತ್ತು ಬದುಕಿದ್ದೀರಿ, ಮುಂದಕ್ಕೆ ನಿಮ್ಮನ್ನು ಬಿಡುವುದಿಲ್ಲ’ ಎಂದು ಹೇಳಿ ತಾನು ತಂದ ಮೋಟಾರು ಸೈಕಲ್ನ್ನು ಚಲಾಯಿಸಿಕೊಂಡು ಹೋಗಿದ್ದು, ನಂತರ ಶರತ್ ದೇವಾಡಿಗನ ಸ್ನೇಹಿತರು ಗಂಭೀರ ಗಾಯಗೊಂಡ ಶರತ್ ದೇವಾಡಿಗನನ್ನು ಕೂಡಲೇ ಚಿಕಿತ್ಸೆಗಾಗಿ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಆತ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ೭ ದಿನಗಳ ಕಾಲ ಒಳರೋಗಿಯಾಗಿ ದಾಖಲಾಗಿ ಚೇತರಿಸಿಕೊಂಡಿರುತ್ತಾನೆ.
ಆಸ್ಪತ್ರೆಯಲ್ಲಿ ಶರತ್ ದೇವಾಡಿಗನು ನೀಡಿದ ದೂರಿನ ಆಧಾರದಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಅ.ಕ್ರ ೧೦೭/೨೧ ರಂತೆ ದಾಖಲಾಗಿದ್ದು ನಂತರ ಕಾಪು ಪೊಲೀಸ್ ಠಾಣೆ ಪಿ.ಎಸ್.ಐ ರಾಘವೇಂದ್ರ ಸಿ ರವರು ತನಿಖೆ ನಡೆಸಿ ಆರೋಪಿಯ ವಿರುದ್ಧ ಕಲಂ ೩೨೪, ೩೨೬, ೩೦೭, ೫೦೪, ೫೦೬ ಭಾ.ದಂ.ಸಂ ರಂತೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದ ವಿಚಾರಣೆ ನಡೆಸಿದ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕಿರಣ್ ಎಸ್ ಗಂಗಣ್ಣವರ್ ರವರು ಆರೋಪಿತನು ತಪ್ಪಿತಸ್ಥ ಎಂದು ತಿರ್ಮಾನಿಸಿ ಆರೋಪಿಗೆ ಈ ಕೆಳಕಂಡಂತೆ ಶಿಕ್ಷೆ ವಿಧಿಸಿ ದಿನಾಂಕ: ೧೮/೦೨/೨೦೨೬ ರಂದು ತೀರ್ಪು ನೀಡಿರುತ್ತಾರೆ.
ಈ ಪ್ರಕರಣದ ಆರೋಪಿಯಾದ ಅಭಿಷೇಕ್ ಶ್ರೀಯಾನ್ ಈತನಿಗೆ ಭಾ.ದಂ.ಸಂ. ಕಲಂ ೩೦೭ ರಡಿಯ ಅಪರಾದಕ್ಕೆ ೩ ವರ್ಷ ೧೦ ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. ೨೦,೦೦೦/- ರೂಪಾಯಿ ದಂಡ ವಿಧಿಸಿದ್ದು, ಭಾ.ದಂ.ಸಂ ಕಲಂ ೫೦೪ ರಡಿಯ ಅಪರಾದಕ್ಕೆ ೩.೦೦೦/- ರೂಪಾಯಿ ದಂಡ ವಿಧಿಸಿದ್ದು, ಭಾ.ದಂ.ಸಂ ಕಲಂ ೫೦೬ ರಡಿಯ ಅಪರಾದಕ್ಕೆ ೭,೦೦೦/- ರೂಪಾಯಿ ದಂಡ ವಿಧಿಸಿದ್ದು, ಭಾ.ದಂ.ಸಂ ಕಲಂ ೩೨೪ ರಡಿಯ ಅಪರಾದಕ್ಕೆ ೨೦,೦೦೦/-ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಆರೋಪಿತನಿಂದ ವಸೂಲಾದ ದಂಡದ ಹಣದ ಪೈಕಿ ರೂ.೪೫,೦೦೦/-ವನ್ನು ಪಿರ್ಯಾದುದಾರರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಲಾಗಿರುತ್ತದೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ರವರು ವಾದ ಮಂಡಿಸಿದ್ದಾರೆ.






























