ಚಳವಳಿಗಳಿಂದ ನಾಡಿನ ಸಾಹಿತ್ಯ, ಸಂಸ್ಕೃತಿ ಜೀವಂತ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.24:-
ಎಲ್ಲಿಯವರೆಗೆ ಕನ್ನಡ ಚಳವಳಿ ಜೀವಂತವಾಗಿರುತ್ತದೋ ಅಲ್ಲಿಯವರೆಗೆ ನಮ್ಮ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿರುತ್ತದೆ ಎಂದು ಸಾಹಿತಿ ಪೆÇ್ರ.ಸಿ.ನಾಗಣ್ಣ ಹೇಳಿದರು.

ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘ ಜೆಎಲ್‍ಬಿ ರಸ್ತೆಯ ಆರಾಧ್ಯ ಮಹಾಸಭಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುವರ್ಣ ಕರ್ನಾಟಕ ಸಂಭ್ರಮ-50, ರಾಜಶೇಖರ ಕೋಟಿ, ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಸ್ಮರಣಾರ್ಥ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಬರಹಗಾರರು ಸಾಫ್ಟ್‍ವೇರ್, ಚಳವಳಿಗಾರರು ಹಾರ್ಡ್‍ವೇರ್ ಇದ್ದಂತೆ. ಇವರಲ್ಲಿ ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲು ಸಾಧ್ಯವೇ ಇಲ್ಲ. ಚಳವಳಿಗಾರರು ಜಾಗೃತರಾಗಿರುವುದರಿಂದ ಬರಹಗಾರರ ಬರಹ ನಿರಾಂತಕವಾಗಿ ಸಾಗುತ್ತದೆ. ನಾಡು-ನುಡಿಯ ಸಮೃದ್ಧಿಗೆ ಚಳವಳಿಗಾರರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗುತ್ತಾರೆ ಎಂದರು.

ಭಾಷೆಯ ಅಂತಶ್ಚೈತನ್ಯವನ್ನು ಸಮೃದ್ಧಗೊಳಿಸಲು ಬರಹಗಾರರು ಸದಾ ಕಾರ್ಯಮಗ್ನರಾಗಿರಬೇಕು. ಭಾಷಿಕ ಹಾಗೂ ಸಾಹಿತ್ಯಿಕ ವಿಷಯ ಬಂದಾಗ ಇತರ ಭಾಷೆಗಳಿಗೆ ಹೊಯ್ ಕಯ್ಯಾಗಿ ನಿಲ್ಲಬೇಕಾಗುತ್ತದೆ. ಈ ವಿಷಯದಲ್ಲಿ ನಾವು ಅದೃಷ್ಟವಂತರು. ಹತ್ತನೇ ಶತಮಾನದಿಂದ ಹಿಡಿದು ವರ್ತಮಾನದವರೆಗೆ ನಿರಂತರವಾಗಿ ನಮ್ಮ ತಾಯ್ನುಡಿಯ ಅಂತಶ್ಚೈತನ್ಯವನ್ನು ನಮ್ಮ ಕವಿ- ಸಾಹಿತಿಗಳು ಹೆಚ್ಚಿಸುತ್ತಲೇ ಇದ್ದಾರೆ ಎಂದರು.

ಭಾನು ಮಷ್ತಾಕ್ ಅವರ ಕೃತಿ ಇಂಗ್ಲಿಷ್‍ಗೆ ಅನುವಾದಗೊಂಡು ಬೂಕರ್ ಪ್ರಶಸ್ತಿ ಪಡೆದಿರುವ ಪ್ರಸ್ತುತದಲ್ಲಿ ಕುವೆಂಪು ಅವರ ಕೃತಿಗಳು ಇಂಗ್ಲಿಷ್ ಹಾಗೂ ಯುರೋಪಿಯನ್ ಭಾಷೆಗೆ ತರ್ಜುಮೆಯಾಗಿದ್ದರೆ ನೊಬೆಲ್ ಪ್ರಶಸ್ತಿ ದಕ್ಕದೆ ಇರುತ್ತಿರಲಿಲ್ಲ ಎಂದು ಹೇಳಿದರು.
ರಾಜಶೇಖರ ಕೋಟಿ ಹಾಗೂ ಎಚ್.ಎಸ್.ಮಹದೇವಪ್ರಸಾದ್ ಭಾವಚಿತ್ರಗಳಿಗೆ ಪುಷ್ಪಾಮಾಲಿಕೆ ಹಾಕಿ ಕಾರ್ಯಕ್ರಮ ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಈ ಇಬ್ಬರು ಸಾಕಷ್ಟು ಸಾಧನೆ ಮಾಡಿದ್ದಾರೆ. ಇವರನ್ನು ಜನತೆ ಮರೆಯುವ ಪ್ರಶ್ನೆಯೇ ಇಲ್ಲ ಎಂದರು.

ಬ್ಯಾಂಕಿನಲ್ಲಿ ಕನ್ನಡ ಮಾತನಾಡಲ್ಲ ಎಂಬ ವರ್ತನೆ ಈಗಲೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಕನ್ನಡಪರ ಸಂಘಟನೆಗಳ ಹೋರಾಟ ಅಗತ್ಯವಿದೆ ಎಂದರು.
ಬಿ.ಎ.ಶಿವಶಂಕರ್ ಕನ್ನಡ ನಾಡು-ನುಡಿ, ಜಲ-ಗಡಿ ವಿಚಾರದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ. ಮಾಜಿ ಶಾಸಕ ಎಂ.ಕೆ. ಸೋಮಶೇಖರ್. ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರೂತ್ ಗೌಡ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಸಾಹಿತಿ ಡಾ.ಸಿಪಿಕೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮೂಗೂರು ಶಿವಶಂಕರ್ ನಿರೂಪಿಸಿದರು. ಮುರಳೀಧರ್ ವಂದಿಸಿದರು.
ನಿವೃತ್ತ ಪೇದೆ ಶಿವಪ್ಪ ಪ್ರಾರ್ಥಿಸಿದರು. ಸ್ವರ ಸಂಗಮ ತಂಡದವರು ನಾಡಗೀತೆ ಹಾಡಿದರು.