ಚರಿತ್ರೆ ತಿಳಿಸುವ ಮಾದ್ಯಮ ಯಕ್ಷಗಾನ

oplus_2

ಪುತ್ತೂರು: ಜಗತ್ತಿನಲ್ಲಿ ಇಡೀ ರಾತ್ರಿ ನಡೆಯುವ ಕಲೆ ಯಕ್ಷಗಾನ. ಚರಿತ್ರೆಯನ್ನು ಜನರಿಗೆ ತಿಳಿಸುವ ಮಾಧ್ಯಮವಾಗಿ ಯಕ್ಷಗಾನ ಕೆಲಸ ಮಾಡುತ್ತಿದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹರಿನಾರಾಯಣದಾಸ ಅಸ್ರಣ್ಣ ಹೇಳಿದರು.
ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಪಟ್ಟೆ ಇದರ ವತಿಯಿಂದ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ವಠಾರದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಅವರು ಆಶೀರ್ವಚನ ನೀಡಿದರು. ದೇವರು ಬಂದು ಯಕ್ಷಗಾನ ನೋಡುತ್ತಾರೆ ಎನ್ನುವ ನಂಬಿಕೆ ಇದೆ. ಯಕ್ಷಗಾನ ಕಲೆ ಅಪಾರವಾದ ಶಕ್ತಿಯನ್ನು ಹೊಂದಿದೆ. ಕನ್ನಡ ಮಾಧ್ಯಮಕ್ಕೆ ಶಾಲೆಗಳಲ್ಲಿ ಅಧ್ಯಾಪಕರ ನೇಮಕ ಆಗಿಲ್ಲ ಹಲವು ವರ್ಷಗಳೇ ಕಳೆದಿವೆ. ಆದರೆ ಆಂಗ್ಲ ಮಾಧ್ಯಮಕ್ಕೆ ಎಲ್ಲಾ ಕಡೆಯಿಂದ ಪ್ರೋತ್ಸಾಹ ನೀಡಲಾಗುತ್ತಿದೆ. ದೇವಾಲಯಗಳ ಮೂಲಕವೂ ಶಾಲೆ ಉಳಿಸುವ ಪ್ರಯತ್ನ ಅಭಿನಂದನಾರ್ಹವಾಗಿದೆ. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪರೋಕ್ಷ ರೂಪದಲ್ಲಿ ದೇವರು ಕಾರಣ ಆಗುವುದು ಉತ್ತಮ ಬೆಳವಣಿಗೆ ಎಂದರು.
ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ ದೇವಿಯ ಕಾರ್ಯಕ್ರಮದಿಂದ ತಾಯಿಯ ಆರಾಧನೆಯೊಂದಿಗೆ ಜ್ಞಾನ ಸಂಪತ್ತು ವೃದ್ಧಿಯಾಗುತ್ತದೆ ಎಂದರು.
ಪಟ್ಟೆಯ ಕಟೀಲು ದುರ್ಗಾ ಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಅಚ್ಯುತ ಭಟ್ ಪಾದೆಕರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಯಲಾಟ ಸಮಿತಿ ಪ್ರಮುಖರಾದ ಪದ್ಮನಾಭ ರೈ ಅರೆಪ್ಪಾಡಿ, ರಘುರಾಮ, ಸುಬ್ಬಪ್ಪ ಪಾಟಾಳಿ ಅತಿಥಿಗಳನ್ನು ಗೌರವಿಸಿದರು.
ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕ ವಿಘ್ನೇಶ್ ಹಿರಣ್ಯ ಸ್ವಾಗತಿಸಿ, ನಿವೃತ್ತ ಮುಖ್ಯಶಿಕ್ಷಕಿ ಶಂಕರಿ ಕೆ. ವಂದಿಸಿದರು. ಪ್ರಾಧ್ಯಾಪಕ ಹರಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯಿತು.