
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.21:- ಕಾಂಗ್ರೆಸ್ ಪ್ರಚಾರ ಸಮಿತಿಗೆ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಸಹಮತವಿದ್ದು, ಪಕ್ಷವನ್ನು ಗ್ರಾಮ ಪಂಚಾಯಿತಿ ಮಟ್ಟದಿಂದ ಸದೃಢಗೊಳಿಸಲು ಪ್ರಚಾರ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಸಂಯೋಜಕ, ಚಾ.ನಗರ ಜಿಲ್ಲೆಯ ಪಕ್ಷದ ಉಸ್ತುವಾರಿ ಎಸ್. ನಾರಾಯಣ್ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು. ಕಾಂಗ್ರೆಸ್ ಪ್ರಚಾರ ಸಮಿತಿ ಕೇವಲ ಚುನಾವಣೆಗೆ ಸಿಮೀತಲವಾಗಿಲ್ಲ. ಇದು ಕಾಂಗ್ರೆಸ್ ಪಕ್ಷದ ಸಾಧನೆಗಳು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಕುರಿತು ಪ್ರಚಾರ ಹಾಗೂ ಬಿಜೆಪಿ ಸರ್ಕಾರ ವೈಫಲ್ಯವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ತಾವೆಲ್ಲರು ಇಂದಿನಿಂದಲೇ ಸಕ್ರಿಯವಾಗಬೇಕು ಎಂದರು.
ಇತರೇ ಸಮಿತಿಗಳು ಇದ್ದಂತೆ ನಮ್ಮ ಪ್ರಚಾರ ಸಮಿತಿ ಇರುವುದಿಲ್ಲ. ವರ್ಷದ ಎಲ್ಲಾ ದಿನಗಳಲ್ಲಿಯು ಸಹ ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಗ್ರಾಮ ಮಟ್ಟದಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ನಮ್ಮ ಪ್ರಚಾರ ಸಮಿತಿಯ ಸದಸ್ಯರು ತೆರಳಿ ಅವರಿಗೆ ಮನ ಮುಟ್ಟುವಂತೆ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ಅಲ್ಲದೇ ಪಕ್ಷದ ಬಗ್ಗೆ ಜನರಿಗಿರುವ ಅಭಿಪ್ರಾಯಗಳ ಬಗ್ಗೆಯು ತಿಳಿಸಬೇಕು. ಇದನ್ನು ಎಐಸಿಸಿ ಹಾಗೂ ಕೆಪಿಸಿಸಿ ಮಟ್ಟಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ. ಹೀಗಾಗಿ ಸ್ಥಳೀಯ ಶಾಸಕರು. ಸಂಸದರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ರೂಪಿಸಬೇಕು. ಅವರ ಕಾರ್ಯಕ್ರಮಗಳಿಗೂ ಸಹ ತಾವೆಲ್ಲರು ತಪ್ಪದೇ ಭಾಗವಹಿಸಬೇಕು ಎಂದು ನಾರಾಯಣ್ ಕಿವಿಮಾತು ಹೇಳಿದರು.
ಮನರೇಗಾ ವಿರುದ್ದ ಜಾಗೃತಿಗೊಳಿಸಿ: ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯನ್ನು ಕೈಬಿಟ್ಟು, ವಿಬಿಜಿ. ರಾಮ್ ಜೀ ಯೋಜನೆಯನ್ನು ಜಾರಿ ಮಾಡಿದ್ದಾರೆ. ಇದು ಗ್ರಾಮೀಣ ಜನರಿಗೆ ಮರಣಶಾಸನವಾಗಿದ್ದು, ಹಳ್ಳಿ ಜನರ ಕೂಲಿಯನ್ನು ಮತ್ತು ಆ ಭಾಗ ಅಭಿವೃದ್ದಿಯನ್ನು ಕಿತ್ತು ಕೊಂಡಿದೆ. ಇದು ಒಂದು ರೀತಿ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಂಡು ಮಹಾತ್ಮ ಗಾಂಧಿ ಹಾಗೂ ರಾಷ್ಟ್ರಪಿತನಿಗೆ ಅಪಮಾನ ಮಾಡಿದೆ. ಇದನ್ನು ಹೆಚ್ಚು ಜನರಲ್ಲಿ ಜಾಗೃತಿ ಗೊಳಿಸಿ, ಬಿಜೆಪಿ ವಿರುದ್ದ ಸಂಘಟಿತ ಹೋರಾಟ ರೂಪಿಸೋಣ ಎಂದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಕ್ಷೇತ್ರದ ಅಭಿವೃದ್ದಿಯಲ್ಲಿ ಸರ್ಕಾರ ನೀಡುತ್ತಿರುವ ಬರಪೂರ ಅನುದಾನಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಆಡಳಿತ ಪರವಾಗಿ ಪ್ರಚಾರ ಸಮಿತಿಯು ಹೆಚ್ಚು ಪ್ರಚುರಪಡಿಸುವ ಮೂಲಕ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಪಕ್ಷದ ಸಂಘಟನೆ ಗೊಳ್ಳಬೇಕು. ನಾಲ್ಕು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಭೇರಿ ಹಾಗೂ ಮುಂಬರುವ ಜಿ.ಪಂ.ತಾ.ಪಂ. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಅಧಿಕಾರ ಹಿಡಿಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದೆ. ದಿ. ಎಚ್.ಎಸ್.ಮಹದೇವಪ್ರಸಾದ್, ದಿ. ಆರ್. ಧ್ರುವನಾರಾಯಣ್ ಅವರು ಸಂಘಟನೆ ಚತುರರಾಗಿದ್ದರು. ಅವರ ಸಂಘಟನೆ ಮತ್ತು ರಚನಾತ್ಮಕ ಕಾರ್ಯಕ್ರಮಗಳು ದೂರದೃಷ್ಟಿಯುತ ನಾಯಕತ್ವ ಪಕ್ಷವನ್ನು ಬಲಿಷ್ಠವಾಗಿದೆ. ಅವರ ಮಾದರಿಯಲ್ಲಿ ಜಿಲ್ಲೆಯನ್ನು ಸಂಘಟಿಸುವ ನಾಯಕರು ನಮಗೆ ಅವಶ್ಯಕವಾಗಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಮೂವರು ಶಾಸಕರು, ಸಂಸದರು, ಮಾಜಿ ಶಾಸಕರು ಇದ್ದಾರೆ. ನೀವೆಲ್ಲರು ಸಹ ಜಿಲ್ಲೆಯ ಕಾಂಗ್ರೆಸ್ ಸಂಘಟನೆಯಲ್ಲಿ ಈ ಇಬ್ಬರು ನಾಯಕರಂತೆ ಸಂಘಟಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಹೊಸಹಳ್ಳಿ ಮಧುಸೂಧನ್ ಗಣ್ಯರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾಡಿದರು. ಬಳಿಕ ಗಣ್ಯರು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಪಕ್ಷದ ಶಾಲ್ಯ ಹಾಕಿ, ನೇಮಕಾತಿ ಪತ್ರವನ್ನು ನೀಡಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಾಸಕÀ ಎಚ್.ಎಂ. ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ಆರ್. ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಗಾಕಿ ನಾಗರತ್ನ, ಬ್ಲಾಕ್ ಅಧ್ಯಕ್ಷರಾದ ತೋಟೇಶ್, ಮಹಮದ್ ಅಸ್ಗರ್‍ಮುನ್ನಾ, ಹೊಂಗನೂರುಚಂದ್ರು, ರಾಜಶೇಖರ್, ಈಶ್ವರ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ಗೂಳಿಪುರ ನಾಗೇಂದ್ರ, ಸೈಯದ್ ರಫಿ, ಎಎಚ್‍ಎನ್‍ಖಾನ್, ಜಿ.ಪಂ. ಮಾಜಿ ಅಧ್ಯಕ್ಷ ಕಾವೇರಿ ಶಿವಕುಮಾರ್, ನಗರಸಭಾ ಮಾಜಿ ಸದಸ್ಯರಾದ ಚಿನ್ನಮ್ಮ, ಕಲಾವತಿ, ಪ್ರಚಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿಸಲವಾಡಿ ರವಿ, ಪದಾಧಿಕಾರಿಗಳಾದ ಕೆಂಪರಾಜು, ರವಿ ದೊಡ್ಡರಾಯಪೇಟೆ, ಕೆರಹಳ್ಳಿ ರಾಜಕುಮಾರ್, ಸಿದ್ದರಾಜನಾಯಕ, ಆರ್.ಡಿ. ಉಲ್ಲಾಸ್, ಕೆರೆಹಳ್ಳಿ ಶಂಕರ್, ಮಾದೇಶ್, ಸೈಯದ್ ನಸ್ರುಲ್, ಮೊದಾಲದವರು ಇದ್ದರು.




























