Home ಸುದ್ದಿ ರಾಷ್ಟ್ರೀಯ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ

ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ

ಕೆ.ಆರ್.ಪುರ:ಮಾ.8:- ಕೆ.ಆರ್.ಪುರ ಕ್ಷೇತ್ರದ ಚಿಕ್ಕಬಸವನಪುರದಲ್ಲಿ 52ನೇ ವರ್ಷದ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಇರಿಸಿ ಭವ್ಯ ಮೆರವಣಿಗೆ ನಡೆಸಲಾಯಿತು.
52ನೇ ವರ್ಷದ ಊರಹಬ್ಬದ ಹಿನ್ನಲೆ ಮುನೇಶ್ವರಸ್ವಾಮಿ, ಸಪಲಮ್ಮ, ಓಂಕಾಳಮ್ಮ, ದೊಡ್ಡಮ್ಮ, ಗಂಗಮ್ಮ,ಯಲ್ಲಮ್ಮ, ಮುತ್ಯಾಲಮ್ಮ,ಚೌಡೇಶ್ವರಿ ಅಮ್ಮ,ಮಾರಿಯಾಮ್ಮ ಪಲ್ಲಕ್ಕಿ ಉತ್ಸವ ಮಾಡಿ ಚಿಕ್ಕಬಸವನಪುರ ಮತ್ತು ಸ್ವತಂತ್ರ ನಗರ ಗ್ರಾಮಗಳ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಿ ಪ್ರತಿ ಮನೆ ಮನೆಗಳಿಗೆ ಹೋಗಿ ಪೂಜೆಯನ್ನ ಪಡೆಯುವ ಮೂಲಕ ಭಕ್ತಿ ಭಾವ ಮೆರೆದರು.


ಉತ್ಸವದಲ್ಲಿ ದಾರಿಯುದ್ದಕ್ಕೂ ಜಂಗಮಕೋಟೆ ಕಲಾತಂಡದೊಂದಿಗೆ ಯುವಕರು ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಾಲ್ಕು ದಿನ ನಡೆಯುವ ಚಿಕ್ಕಬಸವನಪುರ ಗ್ರಾಮದೇವತೆ ಉತ್ಸವದಲ್ಲಿ ಮೊದಲ ದಿನ ಕರಗ ಪೂಜಾರಿ ಕೋಲಾರ ವೆಂಕಟೇಶ್ ಅವರು ಭಕ್ತಿಪರ ನೃತ್ಯ ಹಾಗೂ ಸಾಂಪ್ರದಾಯಿಕ ಆಚರಣೆಗಳ ಮೂಲಕ ಜನರನ್ನು ಆಕರ್ಷಿಸಿದರು.


ಎರಡನೇ ದಿನ ಅನ್ನದಾನ, ಹಸಿ ಕರಗ ಮತ್ತು ನೂರಾರು ಭಕ್ತರು ಹೂವು ಕರಗ ಎತ್ತುವ ಮೂಲಕ ತಮ್ಮ ಕೊರಿಕೆ ಈಡೇರಿಸಿದರು.
ಮೂರನೇ ದಿನ ಎಲ್ಲಾ ಗ್ರಾಮದೇವತೆಗಳಿಗೆ ತಂಬಿಟ್ಟು ದೀಪಗಳ ಮೆರವಣಿಗೆ ಮಾಡಲಾಯಿತು. ನಾಲ್ಕನೇ ದಿನ ಗ್ರಾಮದೇವತೆ ಉತ್ಸವ ಅದ್ದೂರಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಮುಕ್ತಾಯವಾಯಿತು.


ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಪಾಪಣ್ಣ,ಜಯಪ್ಪ, ಮುನಿಸ್ವಾಮಿ, ಗೊಂದಸ್ವಾಮಿ,ರಾಮಕೃಷ್ಣ, ಯುವಕರಾದ ಬಸವನಪುರ ವೆಂಕಟೇಶ್, ಮುಕುಂದ, ಗೋಪಾಲ್, ಎಸ್.ಎಂ.ಎಸ್ ಮಂಜು,ಮುನಿರಾಜ್, ನಾಗರಾಜ್, ಗೋವಿಂದ, ವಿ.ರಾಜೇಶ್.ಮಂಜು, ಸುಬ್ಬು, ಮುನಿ, ವಿಜಿ, ವಿನೋದ್ ಮತ್ತಿತರು ಇದ್ದರು.