ಗ್ರಾಮ ಆಡಳಿತಾಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ರೈತಸಂಘ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜ.16:
ತಾಲೂಕಿನ ಸಿಂಧುಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಳೇನಹಳ್ಳಿ ಸರ್ವೆ ನಂ.7/2 ಮತ್ತು 8/2 ರ ಕೃಷಿ ಭೂಮಿಯನ್ನು ಕುಟುಂಬದ ಸದಸ್ಯನೇ ಅಲ್ಲದ ಅನ್ಯ ವ್ಯಕ್ತಿಯ ಹೆಸರಿಗೆ ಪೌತಿ ಖಾತೆ ಮಾಡಿರುವ ಗ್ರಾಮ ಆಡಳಿತಾಧಿಕಾರಿಯ(ವಿ.ಎ) ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕು ರೈತಸಂಘದ ಮುಖಂಡರುಗಳು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರನ್ನು ಆಗ್ರಹಿಸಿದರು.


ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಸೀಲ್ದಾರರೊಂದಿಗೆ ಪೌತಿ ಖಾತೆ ಸಂಬಂಧ ಸಭೆ ನೆಡಸಿದ ರೈತಸಂಘದ ಕಾರ್ಯಕರ್ತರು ಪೌತಿ ಖಾತೆಯಲ್ಲಿನ ಅನ್ಯಾಯಗಳ ಬಗ್ಗೆ ಸಭೆಯಲ್ಲಿ ಸವಿವರವಾಗಿ ಪ್ರಸ್ತಾಪಿಸಿದರು.


ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ ತಾಲೂಕಿನಾದ್ಯಂತ ಪೌತಿ ಖಾತೆ ಆಂದೋಲನ ನಡೆಯುತ್ತಿದೆ. ರಾಜ್ಯ ಸರ್ಕಾರ ರೈತರ ಮನೆ ಬಾಗಿಲಿಗೇ ಹೋಗಿ ಯಾವುದೇ ಲಂಚವಿಲ್ಲದಂತೆ ಪೌತಿ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ನಿರ್ದೇಶಿಸಿದೆ. ಆದರೆ ಕೆ.ಆರ್.ಪೇಟೆ ತಾಲೂಕಿನಲ್ಲಿ ಲಂಚವಿಲ್ಲದೆ ಪೌತಿ ಖಾತೆ, ಪಹಣಿ ತಿದ್ದುಪಡಿಯಂತಹ ಕಾರ್ಯಗಳು ನಡೆಯುತ್ತಿಲ್ಲ. ಎಲ್ಲಾ ದಾಖಲಾತಿಗಳನ್ನು ಒದಗಿಸಿಕೊಟ್ಟರೂ ರೈತರು ಪೌತಿ ಖಾತೆಗಾಗಿ ದಿನನಿತ್ಯ ಸುತ್ತಾಡಬೇಕಾಗಿದೆ. ಕೆಲವೊಮ್ಮೆ ಪೌತಿ ಖಾತೆಗೆ ಅಗತ್ಯವಿಲ್ಲದಿದ್ದರೂ ಮೂಲ ದಾಖಲಾತಿಗಳನ್ನು ಕೇಳುತ್ತಾರೆ. ಮೂಲ ದಾಖಲಾತಿಗಳಿಗೆ ರೈತರು ಅರ್ಜಿ ಕೊಟ್ಟರೆ ಎರಡು-ಮೂರು ತಿಂಗಳು ಸುತ್ತಾಡಿಸಿ ಅನಂತರ ಕಛೇರಿಯಲ್ಲಿ ಮೂಲ ದಾಖಲೆಗಳು ಲಭ್ಯವಿಲ್ಲ ಎಂದು ಹಿಂಬರಹ ನೀಡಿ ಕಳುಹಿಸುತ್ತಾರೆ.

ಹಣಕೊಟ್ಟವರಿಗೆ ತಕ್ಷಣವೇ ಮೂಲ ದಾಖಲೆಗಳನ್ನು ನೀಡುತ್ತಿದ್ದಾರೆ. ಆರ್.ಐ ಮತ್ತು ವಿ.ಎ ಗಳಿಗೆ ಹಣಕೊಟ್ಟರೆ ನಮ್ಮ ದಾಖಲೆಗಳು ಆನ್‍ಲೈನ್‍ಗೆ ಅಪ್‍ಲೋಡ್ ಆಗುತ್ತವೆ. ಇಲ್ಲದಿದ್ದರೆ ಅವು ಅವರ ಟೇಬಲ್ ನಲ್ಲಿಯೇ ಉಳಿಯುತ್ತವೆ. ತಾಲೂಕಿನ ಮಾಳೇನಹಳ್ಳಿ ಗ್ರಾಮದಲ್ಲಿ ರೈತ ಪುಟ್ಟರಾಜು ಎನ್ನುವವರ ಕುಟುಂಬಕ್ಕೆ ಸೇರಿದ ಕೃಷಿ ಭೂಮಿಯನ್ನು ಕುಟುಂಬಕ್ಕೆ ಸಂಭಂದವೇ ಇಲ್ಲದ ಡಿ.ಪುಟ್ಟರಾಜು ಎನ್ನುವವರ ಹೆಸರಿಗೆ ಪೌತಿ ಖಾತೆ ಮಾಡಿ ನೈಜ ರೈತರ ಆಸ್ತಿಯನ್ನು ಅನ್ಯರ ಪಾಲು ಮಾಡಿದ್ದಾನೆ. ತಾಲೂಕಿನ ರಾಜೇನಹಳ್ಳಿ ಗ್ರಾಮದ ರೈತ ನಾರಾಯಣ ಎನ್ನುವವರಿಗೆ ಪಾಲುಪಟ್ಟಿಯಂತೆ ಖಾತೆ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಆದೇಶವಾಗಿದ್ದರೂ ಕಳೆದ ಎರಡು ವರ್ಷಗಳಿಂದ ರೈತ ನಾರಾಯಣ ತನ್ನ ಜಮೀನು ಖಾತೆ ಮಾಡಿಸಿಕೊಳ್ಳಲು ತಾಲೂಕು ಕಛೇರಿಗೆ ಸುತ್ತಾಡುತ್ತಿದ್ದಾನೆ. ತಾಲೂಕು ಕಛೇರಿಗೆ ಸುತ್ತಿ ಸುತ್ತಿ ರೈತರ ಜೇಬು ಖಾಲಿಯಾಗುತ್ತಿದ್ದರೆ ಕಂದಾಯ ಇಲಾಖೆಯ ನೌಕರರ ಜೇಬು ಭರ್ತಿಯಾಗುತ್ತಿದೆ. ತಪ್ಪುಮಾಡಿ ರೈತರನ್ನು ಕೋರ್ಟು ಕಛೇರಿಗಳಿಗೆ ತಿರುಗಾಡಿಸುವ ಗ್ರಾಮ ಆಡಳಿತಾಧಿಕಾರಿಗಳನ್ನು ಕೇವಲ ಅಮಾನತ್ತು ಮಾಡಿದರೆ ಸಾಲದು, ಬದಲಾಗಿ ಸೇವೆಯಿಂದಲೇ ವಜಾ ಮಾಡಬೇಕು. ಇಲ್ಲದಿದ್ದರೆ ರೈತರ ಬದುಕಿಗೆ ರಕ್ಷಣೆಯಿರುವುದಿಲ್ಲ ಎಂದು ಆಗ್ರಹಿಸಿದರು.


ವಾಗ್ದಂಡನೆ: ಮಾಳೇನಹಳ್ಳಿ ಪೌತಿ ಖಾತೆ ವಿಚಾರದಲ್ಲಿ ಅಕ್ರಮ ಮಾಡಿದ ಗ್ರಾಮ ಆಡಳಿತಾಧಿಕಾರಿ ಈರಣ್ಣ ಎನ್ನುವವರನ್ನು ಸ್ಥಳಕ್ಕೆ ಕರೆಯಿಸಿದ ರೈತಸಂಘದ ಕಾರ್ಯಕರ್ತರು ಯಾವ ಆಧಾರದ ಮೇಲೆ ಕುಟುಂಬಕ್ಕೆ ಸೇರದ ಅನ್ಯ ವ್ಯಕ್ತಿಯ ಹೆಸರಿಗೆ ಪೌತಿ ಖಾತೆ ಮಾಡಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕರಿ ನೌಕರರು ಹಣಕ್ಕಾಗಿ ತಮ್ಮ ಆತ್ಮ ಗೌರವವನ್ನೆ ಮಾರಿಕೊಳ್ಳುತ್ತಿದ್ದಾರೆ. ಲಜ್ಜೆಗೆಟ್ಟ ವಿದ್ಯಾವಂತರು ಸರ್ಕಾರಿ ನೌಕರರಾಗಿ ಜನರ ಸುಲಿಗೆಯಲ್ಲಿ ನಿರತರಾಗಿದ್ದಾರೆ. ಅಧಿಕಾರಿಗಳು ತಪ್ಪಿತಸ್ಥ ನೌಕರರ ವಿರುದ್ದ ಕ್ರಮ ಜರುಗಿಸುವ ಬದಲು ಅವರ ರಕ್ಷಣೆಗೆ ನಿಂತಿದ್ದಾರೆ. ಕಂದಾಯ ಇಲಾಖೆಯ ಭ್ರಷ್ಟರಿಗಿಂತ ನಮ್ಮೂರಿನ ಕೂಲಿ ಕಾರ್ಮಿಕರೇ ಮೇಲು. ಅವರು ಆತ್ಮ ಗೌರವದಿಂದ ಕೆಲಸ ಮಾಡುತ್ತಾರೆ ಎಂದು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಗ್ರಾಮ ಆಡಳಿತಾಧಿಕಾರಿ ಈರಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.


ರೈತ ಹೋರಾಟಗಾರರ ಮುಂದೆ ತಮ್ಮ ತಪ್ಪು ಒಪ್ಪಿಕೊಂಡ ಗ್ರಾಮ ಆಡಳಿತಾಧಿಕಾರಿ ಈರಣ್ಣ ನನ್ನಿಂದಾಗಿರುವ ತಪ್ಪನ್ನು ನಾನೇ ಸರಿಪಡಿಸಿಕೊಡುತ್ತೇನೆ. ಸದರಿ ಪೌತಿ ಖಾತೆ ಸಂಬಂಧ ನಾನೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಇನ್ನೊಂದು ವಾರದೊಳಗೆ ತಪ್ಪು ಸರಿಪಡಿಸಿಕೊಡುತ್ತೇನೆಂದು ಭರವಸೆ ನೀಡಿ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದರು.


ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ ತಪ್ಪಿತಸ್ಥ ನೌಕರ ಈರಣ್ಣ ಅವರ ವಿರುದ್ದ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಮಾಡುತ್ತೇನೆ. ತಾಲೂಕಿನಲ್ಲಿ ಸುಮಾರು 50 ಸಾವಿರ ಪೌತಿ ಖಾತೆಗಳಾಗಬೇಕಾಗಿದ್ದು ಇದರಲ್ಲಿ ಈಗಾಗಲೇ 10 ಸಾವಿರ ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ. ಪೌತಿ ಖಾತೆ ಆಂದೋಲನದ ಯಶಸ್ಸಿಗೆ ರೈತರ ಸಹಕಾರ ಬೇಕಾಗಿದೆ. ಇನ್ನೊಂದು ವಾರದೊಳಗೆ ತಪ್ಪಿತಸ್ಥ ನೌಕರ ಈರಣ್ಣ ಅವರ ವಿರುದ್ದ ಕ್ರಮ ಆಗುತ್ತದೆ. ಮುಂದಿನ 10 ದಿನದ ಒಳಗೆ ತಾಲೂಕಿನ ಎಲ್ಲಾ ಶಿರಸ್ತೆದಾರರು ಮತ್ತು ಗ್ರಾಮ ಆಡಳಿತಾಧಿಕಾರಿಗಳ ಸಭೆ ನಡೆಸಿ ರೈತರಿಂದ ಲಂಚ ಪಡೆಯದಂತೆ ಮತ್ತು ರೈತರನ್ನು ಅನಗತ್ಯ ಸುತ್ತಾಡಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ನನ್ನಿಂದ ಬ್ರಷ್ಟಾಚಾರ ನಿಯಂತ್ರಣ ಆಗದಿದ್ದರೆ ನಾನೇ ಬೇರೆ ಕಡೆ ಹೋಗುತ್ತೇನೆಂದರು.


ಶಿರಸ್ತೆದಾರರಾದ ಅಸ್ಲಂಭಾಷ, ರಾಜಮೂರ್ತಿ, ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ, ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಮುದ್ದುಕುಮಾರ್, ನಗರೂರು ಕುಮಾರ್, ಹೊನ್ನೇಗೌಡ, ಕರೋಟಿ ತಮ್ಮಯ್ಯ, ಕೃಷ್ಣಾಪುರ ರಾಜಣ್ಣ, ಹಿರೀಕಳಲೆ ಬಸವರಾಜು, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ಕೇಶವ ಸೇರಿದಂತೆ ಹಲವರು ಉಪಸ್ಥಿತರಿದ್ದು ರೈತರ ಸಮಸ್ಯೆಗಳನ್ನು ಅನಾವರಣ ಮಾಡಿದರು